ಬೆಂಗಳೂರು(Bengaluru): ವಿಪರೀತ ಚಳಿ ಹಾಗೂ ಹವಾಮಾನ ವೈಪರೀತ್ಯ ಕಾರಣದಿಂದಾಗಿ ನಗರದಲ್ಲಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್’ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳು ಶೇ 15ರಷ್ಟು ಹೆಚ್ಚಳವಾಗಿವೆ.
ಈ ಸಮಸ್ಯೆ ಎದುರಿಸುತ್ತಿರುವವರಿಗೆ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ (ಆರ್’ಜಿಐಸಿಡಿ) ಚಿಕಿತ್ಸೆ ಒದಗಿಸಲಾಗುತ್ತಿದೆ. ಐಎಲ್’ಐ, ಸಾರಿ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಸಂಸ್ಥೆಗೆ ಪ್ರತಿನಿತ್ಯ 200ಕ್ಕೂ ಅಧಿಕ ಹೊರರೋಗಿಗಳು ಭೇಟಿ ನೀಡುತ್ತಿದ್ದು, ಅವರಲ್ಲಿ ಶೇ 50ರಷ್ಟು ಮಂದಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರೇ ಆಗಿದ್ದಾರೆ. ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್ ಪರೀಕ್ಷೆಗಳಲ್ಲಿ ಪ್ರತಿನಿತ್ಯ ಒಂದೆರಡು ಕೋವಿಡ್ ಪ್ರಕರಣಗಳು ದೃಢಪಡುತ್ತಿವೆ. ಸೋಂಕಿತರಾದವರಿಗೆ 200 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ.
ಕೋವಿಡ್ ಹೆಚ್ಚಳವಿಲ್ಲ: ಚಳಿಗಾಲದ ಅವಧಿಯಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದರಿಂದ ಐಎಲ್‌ಐ, ಸಾರಿ ಪ್ರಕರಣಗಳು ಸಹಜವಾಗಿ ಹೆಚ್ಚಳವಾಗುತ್ತವೆ. ಪ್ರತಿ ವರ್ಷ ಈ ವೇಳೆ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತವೆ. ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗಿಲ್ಲ. ಕೊರೊನಾ ಸೋಂಕು ತಗುಲಿದವರಿಗೂ ತೀವ್ರತೆ ಕಡಿಮೆ ಇರುವುದರಿಂದ ವಿಶೇಷ ಚಿಕಿತ್ಸೆ ಇಲ್ಲದೆಯೇ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.