ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ಮೊದಲ ಬಾರಿಗೆ ಆನ್ ಲೈನ್ ನಲ್ಲಿ 3 ಪದವಿ ಮತ್ತು 12 ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದ್ದು, ಸೆ.30ರೊಳಗೆ ಪ್ರವೇಶ ಪಡೆಯಬಹುದು ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಂಕರ್ ತಿಳಿಸಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಜಾಗತಿಕವಾಗಿ ಯಾವುದೇ ಪ್ರದೇಶದಿಂದ ಒಟ್ಟು 1.10 ಲಕ್ಷ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಎಂಜಿನಿಯರಿಂಗ್ ಹೊರತುಪಡಿಸಿದ ಕೋರ್ಸ್ ಗಳಿವು ಎಂದು ಮಾಹಿತಿ ನೀಡಿದರು.
ಆನ್ ಲೈನ್ ಶಿಕ್ಷಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಕಲಿಯುವವರ ಅಗತ್ಯಗಳನ್ನು ಗುರುತಿಸಿ ಆನ್‌ಲೈನ್ ಬೋಧನೆಗೆ ಮುಂದಾಗಿದ್ದೇವೆ. ವಿದ್ಯಾರ್ಥಿಗಳು ತಾವಿರುವ ಸ್ಥಳದಿಂದಲೇ ಶೈಕ್ಷಣಿಕ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬಹುದು. ಪ್ರವೇಶದಿಂದ ಹಿಡಿದು ಪರೀಕ್ಷೆಗಳವರೆಗೆ ಎಲ್ಲ ಪ್ರಕ್ರಿಯೆಗಳೂ ಸಂಪೂರ್ಣವಾಗಿ ಅನ್‌ಲೈನ್‌ನಲ್ಲೇ ನಡೆಯಲಿವೆ.
ಶುಕ್ರವಾರದಿಂದಲೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ’ ಎಂದರು.
ಸರ್ಕಾರಿ ತಾಂತ್ರಿಕ ವಿಶ್ವವಿದ್ಯಾಲಯಗಳ ಪೈಕಿ ವಿಟಿಯು ಮಾತ್ರವೇ ಮೊದಲಿಗೆ ಅನುಮೋದನೆ ಪಡೆದುಕೊಂಡಿದೆ. ಖಾಸಗಿಗೆ ಹೋಲಿಸಿದರೆ ನಮ್ಮಲ್ಲಿ ಶುಲ್ಕ ಶೇ 70 ಕಡಿಮೆ ಇದೆ. ಉದ್ಯೋಗ ತರಬೇತಿ ಬಯಸಿದವರಿಗೆ ಆನ್ ಲೈನ್ ನಲ್ಲೇ ಒದಗಿಸಲಾಗುವುದು. https://onlinedegree.vtu.ac.in/ ಜಾಲತಾಣದ ಮೂಲಕ ಪ್ರವೇಶ ಪಡೆಯಬಹುದು’ ಎಂದರು.