ಮನೆ ಕಾನೂನು ಟಿಎಪಿಸಿಎಂಎಸ್ ಗೋದಾಮಿನಲ್ಲಿ‌1,600 ಕ್ವಿಂಟಾಲ್ ಪಡಿತರ ನಾಪತ್ತೆ: ಆಹಾರ ಇಲಾಖೆಯ ಇಬ್ಬರು ಅಧಿಕಾರಿಗಳು ಅಮಾನತು

ಟಿಎಪಿಸಿಎಂಎಸ್ ಗೋದಾಮಿನಲ್ಲಿ‌1,600 ಕ್ವಿಂಟಾಲ್ ಪಡಿತರ ನಾಪತ್ತೆ: ಆಹಾರ ಇಲಾಖೆಯ ಇಬ್ಬರು ಅಧಿಕಾರಿಗಳು ಅಮಾನತು

0

ರಾಮನಗರ: ಟಿಎಪಿಸಿಎಂಎಸ್ ಗೋದಾಮಿನಲ್ಲಿ‌1,600 ಕ್ವಿಂಟಾಲ್ ಪಡಿತರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆಹಾರ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಚನ್ನಪಟ್ಟಣ ತಾಲೂಕು ಆಹಾರ ಶಿರಸ್ತೇದಾರ್ ಶಾಂತಕುಮಾರಿ, ಆಹಾರ ನಿರೀಕ್ಷಕ ಕೆ.ಚೇತನ್ ಕುಮಾರ್ ಅಮಾನತು ಅವರನ್ನು ಅಮಾನತು ಮಾಡಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತ ವಾಸಿರೆಡ್ಡಿ ವಿಜಯ ಜ್ಯೋತ್ಸ ಆದೇಶ ಹೊರಡಿಸಿದ್ದಾರೆ.

ಆಹಾರ ಇಲಾಖೆಯ ನಿಯಮಾನುಸಾರ ಕೆಲಸ ಮಾಡಿಲ್ಲವೆಂದು ಆದೇಶದಲ್ಲಿ‌ ನಮೂದು ಮಾಡಲಾಗಿದೆ. ಪ್ರತಿ ತಿಂಗಳ ಅಂತ್ಯದಲ್ಲಿ ಸಗಟು ಮಳಿಗೆಗಳಲ್ಲಿ ಹಂಚಿಕೆಯಾದ ನಂತರ, ಉಳಿಕೆಯಾಗುವ ಅಂತಿಮ ದಾಸ್ತಾನಿನ ಪ್ರಮಾಣ ಮಾಹಿತಿ ಪಡೆದಿಲ್ಲ ಎಂದು ನಮೂದಿಸಲಾಗಿದೆ. ಈ ಪ್ರಕರಣ ಸಂಬಂಧ ಆಹಾರ ಇಲಾಖೆ ಆಯುಕ್ತರು ಇಲಾಖೆ ತಾಲೂಕು ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಮಾಡಿದ್ದರು. ಅಧಿಕಾರಿಗಳು ನೀಡಿದ ಸಮಜಾಯಿಷಿ ಒಪ್ಪದ ಆಹಾರ ಇಲಾಖೆ ಆಯುಕ್ತರು ಟಿಎಪಿಸಿಎಂಎಸ್ ಗೋದಾಮಿನ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚನ್ನಪಟ್ಟಣ ತಾಲೂಕು ಸಾತನೂರು ಸರ್ಕಲ್ ಬಳಿ ಇರುವ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪಡಿತರ ಆಹಾರ ವಿತರಣಾ ಗೋದಾಮಿನಲ್ಲಿ 1,600 ಕ್ವಿಂಟಾಲ್ (3000 ಮೂಟೆ 50 ಲಕ್ಷ ರೂ ಅಂದಾಜು ಮೌಲ್ಯ) ಅಕ್ಕಿ ನಾಪತ್ತೆಯಾಗಿತ್ತು. ತಾಲೂಕಿನ 67 ಪಡಿತರ ಕೇಂದ್ರಗಳಿಗೆ ಪಡಿತರ ಆಹಾರ ವಿತರಣೆ ಮಾಡುವ ಅನುಮತಿ ಪಡೆದಿರುವ ಟಿಎಪಿಸಿಎಂಎಸ್​, ಪ್ರತಿ ತಿಂಗಳು ಅಕ್ಕಿಯನ್ನು ಸಾತನೂರು ಸರ್ಕಲ್‍ನ ಟಿಎಪಿಸಿಎಂಎಸ್ ಗೋದಾಮಿನಿಂದಲೇ ಪಡಿತರ ಕೇಂದ್ರಗಳಿಗೆ ಕಳಿಸಲಾಗುತಿತ್ತು.

ಆಹಾರ ಇಲಾಖೆಯಿಂದ ಒಂದು ತಿಂಗಳ ಮುನ್ನವೇ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗೋದಾಮಿನಲ್ಲಿ ಅಕ್ಕಿಯನ್ನು ಸಂಗ್ರಹ ಮಾಡಲಾಗುತ್ತಿತ್ತು.ಅಲ್ಲದೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಕಳಿಸುವ ಮುನ್ನ, ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯದೆ ಉಳಿದಿರುವ ದಾಸ್ತಾನನ್ನು ಕಡಿತ ಮಾಡಿ ನ್ಯಾಯಬೆಲೆ ಅಂಗಡಿಗೆ ಬಾಕಿ ಪಡಿತರ ಅಕ್ಕಿ ವಿತರಣೆ ಮಾಡಬೇಕಿರುತ್ತದೆ. ಈ ಬಗ್ಗೆ ತಾಲೂಕಿನ ಆಹಾರ ನಿರೀಕ್ಷರು ಹಾಗೂ ಶಿರೇಸ್ತೆದಾರ ಅವರು ಗೋದಾಮಿನ ಕಂಪ್ಯೂಟರ್​ ನಲ್ಲಿ ಆಪ್‍ಗೆ ಹೆಬ್ಬೆಟು ಸಹಿ ನೀಡಬೇಕು, ಜೊತೆಗೆ ಬಾಕಿ ಸ್ಟಾಕ್ ಪರಿಶೀಲನೆ ಮಾಡಿ ಜಿಲ್ಲಾ ಆಹಾರ ಶಾಖೆಗೆ ಮಾಹಿತಿಯನ್ನು ನೀಡಬೇಕಿತ್ತು.

ಆದರೆ ಇಲ್ಲಿ ಜಿಲ್ಲಾ ಆಹಾರ ಶಾಖೆಗೆ ನೀಡಿರುವ ಮಾಹಿತಿಯಲ್ಲಿ ಎಲ್ಲಾ ದಾಖಲೆಗಳು ಮತ್ತು ಸ್ಟಾಕ್‍ನ  ಮಾಹಿತಿಗಳು ಸಮರ್ಪಕವಾಗಿದೆ ಹೊರತು ಗೋದಾಮಿನಲ್ಲಿ ಸ್ಟಾಕ್‍ ನಂತೆ ಅಕ್ಕಿ ಇಲ್ಲದಿರುವ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವುದೇ ಇಷ್ಟೊಂದು ಪ್ರಮಾಣದಲ್ಲಿ ಅಕ್ಕಿ ನಾಪತ್ತೆ ಆಗಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.