ಬೆಂಗಳೂರು: ಮಲೇಷಿಯಾದ ಕಂಪೆನಿಯಲ್ಲಿ ಹಣ ಹೂಡಿದರೆ ಒಂದೇ ದಿನದಲ್ಲಿ ಹೆಚ್ಚು ಲಾಭಾಂಶ ನೀಡುವುದಾಗಿ ಹೇಳಿ 2 ಕೋಟಿ ರೂಪಾಯಿ ವಂಚಿಸಿದ್ದ 7 ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ಯಾಮ್ ಥಾಮಸ್, ಜೋಸ್ ಕುರುವಿಲ, ಜೀನ್ ಕಮಲ್, ಜಾಫರ್ ಸಾದಿಕ್ ಅಲಿಯಾಸ್ ದೀಪಕ್, ವಿಜಯ್ ಚಿಪ್ಲೋಂಕರ್ ಅಲಿಯಾಸ್ ರವಿ, ಅಮಿತ್ ಅಲಿಯಾಸ್ ದೀಪಕ್, ಊರ್ವಶಿ ಗೋಸ್ವಾಮಿ ಅಲಿಯಾಸ್ ಸೋನು ಬಂಧಿತರು. ಇವರಿಂದ 44 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಮಲೇಷಿಯಾದ ‘MEDB ಕ್ಯಾಪಿಟಲ್ ಬೆರ್ಹಾಡ್’ ಎಂಬ ಹೆಸರಿನ ನಕಲಿ ಕಂಪೆನಿ ಆರಂಭಿಸಿದ್ದ ಆರೋಪಿಗಳು, ಹಣವಂತರನ್ನು ಗುರಿಯಾಗಿಸಿಕೊಂಡು ಸಂಪರ್ಕಿಸುತ್ತಿದ್ದರು. ಮಲೇಷಿಯಾದ ತಮ್ಮ ಕಂಪನಿಯಲ್ಲಿ ಹಣ ಹೂಡಿದರೆ ಒಂದೇ ದಿನದಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ಇದೇ ರೀತಿ ಜಿಡಬ್ಲ್ಯೂಡಿ ಕಾಂಟ್ರ್ಯಾಕ್ಟರ್‌ವೋರ್ವರನ್ನು ಸಂಪರ್ಕಿಸಿದ್ದ ಇವರು, ತಮ್ಮ ಕಂಪೆನಿಯಲ್ಲಿ 2 ಕೋಟಿ ರೂ ಹಣ ಹೂಡಿಡಿದರೆ ಒಂದೇ ದಿನದಲ್ಲಿ 3.50 ಕೋಟಿ ರೂ ಹಣವನ್ನು ಆರ್‌ಟಿಜಿಎಸ್ ಅಥವಾ ಎನ್ಇಎಫ್‌ಟಿ ಮೂಲಕ ವರ್ಗಾಯಿಸುವುದಾಗಿ ನಂಬಿಸಿದ್ದರು.
ಆರೋಪಿಗಳ ಮಾತು ನಂಬಿದ್ದ ಕಾಂಟ್ರ್ಯಾಕ್ಟರ್, ಕಬ್ಬನ್‌ಪೇಟೆಯಲ್ಲಿ ಆರೋಪಿಗಳು ತೆರೆದಿದ್ದ ಕಚೇರಿಗೆ ತೆರಳಿ 2 ಕೋಟಿ ರೂ ಹಣ ನೀಡಿದ್ದರು. ಆರಂಭದಲ್ಲಿ ಲಾಭಾಂಶವೆಂದು 9,870 ರೂ ಹಣವನ್ನು ಕಾಂಟ್ರ್ಯಾಕ್ಟರ್ ಖಾತೆಗೆ ವರ್ಗಾಯಿಸಿದ್ದ ಆರೋಪಿಗಳು, ಉಳಿದ ಹಣವನ್ನು ಆದಷ್ಟು ಬೇಗ ನಿಮ್ಮ ಖಾತೆಗೆ ಜಮೆಯಾಗುತ್ತದೆ ಎಂದು ನಂಬಿಸಿದ್ದರು. ಬಳಿಕ ಈ ಕಚೇರಿಯಲ್ಲಿ ಲಾಕರ್ ವ್ಯವಸ್ಥೆಯಿಲ್ಲ, ಸುರಕ್ಷತೆಯ ದೃಷ್ಟಿಯಿಂದ ಬೇರೆ ಕಚೇರಿಯಲ್ಲಿ ಹಣ ಇರಿಸುತ್ತೇವೆ ಎಂದು ತೆರಳಿದ್ದ ಆರೋಪಿಗಳು ವಾಪಸ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ತಾವು ಮೋಸ ಹೋದ ವಿಚಾರ ತಿಳಿದ ಕಾಂಟ್ರ್ಯಾಕ್ಟರ್ ಡಿಸೆಂಬರ್ 11ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಅದೇ ದಿನ ಮೂವರು ಆರೋಪಿಗಳನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದರು. ವಿಚಾರಣೆಯಲ್ಲಿ ಆರೋಪಿಗಳು ನೀಡಿದ ಮಾಹಿತಿಯನ್ವಯ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಕಿಂಗ್‌ಪಿನ್ ಮಲೇಷಿಯಾದಲ್ಲಿ ಕುಳಿತು ವಂಚನೆಯ ಜಾಲ ನಡೆಸುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕಿಂಗ್ ಪಿನ್ ಸೇರಿದಂತೆ ಇನ್ನೂ ಮೂವರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.