ಮನೆ ರಾಜ್ಯ ನಗರದಲ್ಲಿ 2 ದಿನಗಳ ಮಾವು-ಮೇಳ ಆರಂಭ

ನಗರದಲ್ಲಿ 2 ದಿನಗಳ ಮಾವು-ಮೇಳ ಆರಂಭ

0

 ಮೈಸೂರು: ಕರ್ನಾಟಕ ಸರ್ಕಾರ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಲಾಲ್‌ಬಾಗ್, ಬೆಂಗಳೂರು ಇವರ ವತಿಯಿಂದ ನಗರದ ಕುಪ್ಪಣ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಮಾವು ಮೇಳವನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ಅವರು ಉದ್ಘಾಟಿಸಿದರು.

Join Our Whatsapp Group

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ಡಾ ಕೆ.ವಿ ರಾಜೇಂದ್ರರವರು ಮಾತನಾಡಿ, ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಬೆಳದ ಮಾವು ಬೆಳೆಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ 2023ರ ಮಾವುಮೇಳವನ್ನು ಆಯೋಜಿಸಲಾಗಿದ್ದು, ರೈತರು ಮತ್ತು ಗ್ರಾಹಕರ ನಡುವಿನ ನೇರ ವ್ಯಾಪಾರವು ರೈತರಿಗೆ ಆದಾಯ ನೀಡುತ್ತದೆ. ನೈಸರ್ಗಿಕವಾಗಿ ಮಾವು ಬೆಳೆಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಸರ್ಕಾರದ ವತಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ರೈತರು ಬೆಳೆದಂತಹ ಬೆಳೆಗಳಿಗೆ ಪ್ರೋತ್ಸಹವನ್ನು ನೀಡಿದಂತಾಗುವುದು. ಗ್ರಾಹಕರು ಯಾವುದೇ ರೀತಿಯ ಹಾನಿಕಾರಕ ರಾಸಾಯನಿಕ ಸಿಂಪಡಿಸದೆ ಬೆಳೆದಿರುವ ಮಾವುಗಳನ್ನು ಈ ಮೇಳದಲ್ಲಿ ಪಡೆಬಹುವುದಾಗಿದ್ದು, ಮಧ್ಯವರ್ತಿಗಳಿಂದ ರೈತರು ಮತ್ತು ಗ್ರಾಹಕರಿಗೆ ನಷ್ಟವಾಗುವುದನ್ನು ತಪ್ಪಿಸಲು ಇಂತಹ ಮೇಳಗಳು ಅವಶ್ಯಕ ಎಂದು ತಿಳಿಸಿದರು.

 ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಳೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ಹಾನಿಯಾಗಿರುವ ಕಡೆಗಳಲ್ಲಿ ಸೂಕ್ತ ಪರಿಹಾರವನ್ನು ಒದಗಿಸಲಾವುದು. ಕಳೆದ ಬಾರಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳನ್ನು ಗುರುತಿಸಿ ಆಯಾ ತಾಲೂಕುಗಳಿಗೆ ಹಾಗೂ ಲೋ-ಲೈನ್ ಏರಿಯಾಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು. ಮಳೆಯಿಂದ ಹಾನಿಗೊಳಗಾದ ಗ್ರಾಮಗಳನ್ನು ಗುರುತಿಸಿ ಪೂರ್ವ ಸಿದ್ಧತೆಗಳಿರುವ ಮಾಕ್ ಡ್ರಿಲ್‌ಗಳನ್ನು ಮಾಡಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

 ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದ್ದು, ವಿದ್ಯುತ್ ಕಂಬಗಳಿಗೆ ಸ್ಪರ್ಶಿಸುವ, ರಸ್ತೆಗಳಿಗೆ ಬಾಗಿರುವ, ಬೀಳುವ ಪರಿಸ್ಥಿತಿಯಲ್ಲಿರುವ ಹಾಗೂ ಇತರೆ ರೀತಿಗಳಲ್ಲಿ ಹಾನಿ ಉಂಟುಮಾಡುವ ಸಾಧ್ಯತೆ ಇರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಲು ತಿಳಿಸಲಾಗಿದೆ. ಕಳೆದ ಸಾಲಿನಲ್ಲಿ ಪರಿಹಾರ ದೊರೆಯದೇ ಇರುವ ಜನರಿಗೆ ಈ ಸಾಲಿನಲ್ಲಿ ಪರಿಹಾರ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

 ಮಾವು ಬೆಳೆಯುವ ರೈತರು ಹಾಗೂ ಮಾವು ಸವಿಯುವ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಿ, ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಹಾಗೂ ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ ಮಾವು ದೊರಕಿಸಿಕೊಡುವ ದೃಷ್ಠಿಯಿಂದ ಎರಡು ದಿನಗಳ ಮೇಳವನ್ನು ಆಯೋಜಿಸಲಾಗಿದ್ದು, ಮೇಳದಲ್ಲಿ 29 ಮಳಿಗೆಗಳನ್ನು ತೆರೆಯಲಾಗಿದೆ. ನೈಸರ್ಗಿಕವಾಗಿ ಮಾಗಿಸಿರುವ ವಿವಿಧ 10 ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ರೈತರಿಗೆ ಅವಕಾಶವ ಕಲ್ಪಿಸಲಾಗಿದೆ. ಮೈಸೂರು, ಮಂಡ್ಯ, ರಾಮನಗರ ಹಾಗೂ ಕನಕಪುರ ಜಿಲ್ಲೆಗಳ ರೈತರು ಮಾವು ಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

 ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ಡಾ.ರೂಪ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದಿನ ಲೇಖನನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಉದ್ಘಾಟಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಮುಂದಿನ ಲೇಖನರಸ್ತೆಗಳು ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗಿರಬೇಕು: ಡಾ. ಕೆ ವಿ ರಾಜೇಂದ್ರ