ಮೈಸೂರು(Mysuru): ಜಿಲ್ಲೆಯಾದ್ಯಾಂತತ ಸತತವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ನಗರದ ರಿಂಗ್ ರಸ್ತೆ ಬಳಿಯ ಸರ್ವೀಸ್ ರಸ್ತೆಯಲ್ಲಿ 20 ಅಡಿ ಗುಂಡಿ ಬಿದ್ದಿದ್ದು, ಜೀವ ಭಯದಲ್ಲಿ ವಾಹನ ಸವಾರರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯ ಅವಂತಾರಗಳು ಒಂದೆಡೆಯಾದರೆ ಗುಂಡಿ ಬೀಳುತ್ತಿರುವ ರಸ್ತೆಗಳು ಮತ್ತೊಂದೆಡೆ. ಇದರಿಂದಾಗಿ ದಿನ ನಿತ್ಯ ಸಾರ್ವಜನಿಕರು ಪರಿಪಾಟಲು ಹೇಳತೀರದಾಗಿದೆ. ರಸ್ತೆಯಲ್ಲಿ ಸುಮಾರು 20 ಅಡಿ ಗುಂಡಿ ಬಿದ್ದರೂ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ.
ದಟ್ಟಗಳ್ಳಿ, ರಾಜರಾಜೇಶ್ವರಿ ನಗರ, ನಿವೇದಿತಾ ನಗರ ಹಾಗೂ ಇತ್ಯಾದಿ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ದಿನದಿಂದ ದಿನಕ್ಕೆ ಗುಂಡಿಯೊಳಗೆ ಮಣ್ಣು ಕುಸಿಯುತ್ತಿರುವುದರಿಂದ ಗುಂಡಿಯ ಆಕಾರ ದೊಡ್ಡದಾಗುತ್ತಿದೆ.
ಈಗಾಗಲೇ ಬಹುತೇಕ ಸರ್ವಿಸ್ ರಸ್ತೆಯನ್ನು ಗುಂಡಿ ಆಕ್ರಮಿಸಿದ್ದು, ರಿಂಗ್ ರಸ್ತೆಗೂ ವ್ಯಾಪಿಸುವ ಆತಂಕ ಎದುರಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪಾಲಿಕೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಮೀಪದಲ್ಲೇ ಕ್ರಿಕೆಟ್ ತರಬೇತಿ ಕೇಂದ್ರವಿದ್ದು, ಪ್ರತಿನಿತ್ಯ ನೂರಾರು ಮಕ್ಕಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಪಾಯವಿದ್ರೂ ಇದೇ ಮಾರ್ಗದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.ಅಪಾಯವನ್ನು ಅರಿತು ಸ್ಥಳೀಯರೇ ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆ ಬದಿಯಲ್ಲಿದ್ದ ಬ್ಯಾರಿಕೇಡ್ ತಂದು ಗುಂಡಿಯ ಸುತ್ತ ಇಟ್ಟಿದ್ದಾರೆ.
ಮೈಸೂರು ರಿಂಗ್ ರಸ್ತೆಯ ಕುರ್ಗಳ್ಳಿ ಜಂಕ್ಷನ್ ನಲ್ಲಿಯೂ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ರಸ್ತೆಯ ಗುಂಡಿಗೆ ಸಾರ್ವಜನಿಕರು ಗಿಡ ಹಾಕಿದ್ದಾರೆ. ನಿತ್ಯವೂ ಸಾವಿರಾರು ಜನ ಓಡಾಡುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ರಸ್ತೆಯಲ್ಲಿ ಜಾಗ್ರತರಾಗಿಯೇ ವಾಹನ ಸವಾರರು ಸಂಚರಿಸಬೇಕಾಗಿದೆ.
ಅಲ್ಲದೇ ಮಳೆ ಹೆಚ್ಚಾದರೆ ಗುಂಡಿಯೊಳಗೆ ಮತ್ತಷ್ಟು ಮಣ್ಣು ಕುಸಿಯುವ ಭೀತಿ ಎದುರಾಗಿದ್ದು, ಅಧಿಕಾರಿಗಳು ಬೇಗ ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕೆಲಸಮಾಡಬೇಕಾಗಿದೆ.