ಚಿಕ್ಕಮಗಳೂರು: ಶ್ರೀರಾಮಸೇನೆಯಿಂದ ಹಮ್ಮಿಕೊಂಡಿರುವ 21ನೇ ವರ್ಷದ ದತ್ತಮಾಲಾ ಅಭಿಯಾನ ಭಾನುವಾರ(ನ10) ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದುಕೊಳ್ಳಲಿದ್ದಾರೆ.
ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ದತ್ತದೀಪೋತ್ಸವ, ಪಡಿ ಸಂಗ್ರಹ ಕಾರ್ಯಗಳು ನಡೆದಿದ್ದು, ಭಾನುವಾರ ಬೆಳಗ್ಗೆ ನಗರದ ಶಂಕರಮಠ ಸಮೀಪದ ವೇದಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಸ್ವಾಮೀಜಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಸಭೆಯ ನಂತರ ಶಂಕರಮಠ ಸಮೀಪದಿಂದ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ಎಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದ ವರೆಗೂ ಶೋಭಾಯಾತ್ರೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ದತ್ತಭಕ್ತರು ವಾಹನಗಳಲ್ಲಿ ದತ್ತಪೀಠಕ್ಕೆ ತೆಳುವರು.
ದತ್ತಪೀಠದಲ್ಲಿ ಸಮಾವೇಶಗೊಳ್ಳುವ ದತ್ತಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿಂದ ಕೆಲವರು ಕಾಲ್ನಡಿಗೆಯಲ್ಲಿ ಇನ್ನೂ ಕೆಲವರು ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ಅಲ್ಲಿ ಜರಗುವ ಹೋಮ ಹವನಗಳಲ್ಲಿ ಪಾಲ್ಗೊಂಡು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಇದರೊಂದಿಗೆ ಶ್ರೀರಾಮ ಸೇನೆಯಿಂದ ಹಮ್ಮಿಕೊಂಡಿರುವ 21 ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ತೆರೆ ಬೀಳಲಿದೆ.