ಮನೆ ರಾಜ್ಯ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 220 ಕೋಟಿ ರೂ. ನೀರಿನ ಶುಲ್ಕ ಬಾಕಿ

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 220 ಕೋಟಿ ರೂ. ನೀರಿನ ಶುಲ್ಕ ಬಾಕಿ

0

ಮೈಸೂರು(Mysuru): ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಪಾವತಿಯಾಗದೇ 220 ಕೋಟಿ ರೂ. ನೀರಿನ ಶುಲ್ಕ ಬಾಕಿ ಇದೆ ಎಂದು ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.

ಮೈಸೂರು ಪಾಲಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಒಟ್ಟು 1 ಲಕ್ಷ 80 ಸಾವಿರ ಸಂಪರ್ಕಗಳಿವೆ. ಈ ಪೈಕಿ 52 ಸಾವಿರ ಸಂಪರ್ಕಗಳಿಂದ ಒಟ್ಟಾರೆ 220 ಕೋಟಿ ನೀರಿನ ಶುಲ್ಕದ ಬಾಕಿ ಮೊತ್ತ ಹಲವಾರು ವರ್ಷಗಳಿಂದ ಪಾವತಿಯಾಗದೇ ಬಾಕಿಯಿದೆ ಎಂದು ಹೇಳಿದರು.

ಇದರಲ್ಲಿ 146 ಕೋಟಿ ಅಸಲು ಮೊತ್ತವಾದರೆ, 74 ಕೋಟಿ ಬಡ್ಡಿಯ ಅಂಶವಾಗಿದೆ. ಬಡ್ಡಿಯ ಮೊತ್ತವನ್ನು ಮನ್ನಾ ಮಾಡಲು ನಗರಪಾಲಿಕೆಗೆ ಅಧಿಕಾರವಿಲ್ಲ. ಹಾಗಾಗಿ ಬಡ್ಡಿ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಕಳೆದ ಏಪ್ರಿಲ್ 29 ರಂದು ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಜನರಿಗೆ ಹೆಚ್ಚಿನ ಹೊರೆ ಆಗುವುದನ್ನು ತಪ್ಪಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನಗರಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಹಿತದೃಷ್ಟಿಯಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಬಳಕೆದಾರರು ಒಂದೇ ಬಾರಿ ಹಳೆಯ ಬಾಕಿ ಅಸಲು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದಲ್ಲಿ ಅಂತಹ ಬಳಕೆದಾರರ ಹಿಂದಿನ ಬಡ್ಡಿ ಅಂಶವನ್ನು ಒಂದು ಬಾರಿ ಮಾತ್ರ ನಿಶ್ಚಲಗೊಳಿಸಲಾಗುವ ಬಡ್ಡಿ ನಿಶ್ಚಲತೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ‌. ಜುಲೈ 15 ರಿಂದ ಯೋಜನೆ ಜಾರಿಯಾಗುತ್ತಿದ್ದು, ಆರು ತಿಂಗಳ ಕಾಲ ಚಾಲ್ತಿಯಲ್ಲಿರಲಿದೆ. ನೀರಿನ ಬಳಕೆದಾರರು ಇದರ ಸದುಪಯೋಗ ಪಡಿಸಿಕೊಂಡು ಬಾಕಿ ಉಳಿಸಿಕೊಂಡಿರುವ ಮೊತ್ತ ಪಾವತಿಸಬೇಕು ಎಂದು ಮೇಯರ್ ಸುನಂದಾ ಪಾಲನೇತ್ರ ಹೇಳಿದರು.

ಹಿಂದಿನ ಲೇಖನಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಮುಂದಿನ ಲೇಖನನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಲಾಲ್ ಬಾಗ್ ಫ್ಲವರ್ ಶೋ