ನವದೆಹಲಿ(New Delhi): ಬ್ರೆಜಿಲ್‌ನ ಕ್ಯಾಕ್ಸಿಯಾಸ್ ಡೊ ಸುಲ್‌ನಲ್ಲಿ ನಡೆಯುತ್ತಿರುವ 24ನೇ ಶ್ರವಣ ದೋಷವುಳ್ಳವರ ಒಲಿಂಪಿಕ್ಸ್(ಡೆಫಿಲಿಂಪಿಕ್) ಮೂರನೇ ದಿನ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಧನುಷ್ ಶ್ರೀಕಾಂತ್ ಚಿನ್ನದ ಪದಕ ವಿಜೇತರಾಗಿದ್ದಾರೆ.
ಬುಧವಾರ ನಡೆದ ಫೈನಲ್‌ನಲ್ಲಿ ಶೌರ್ಯ ಸೈನಿ, ಕೊರಿಯಾದ ಕಿಮ್ ವೂ ರಿಮ್ ಅವರ ನಂತರದ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಧನುಷ್ ಅವರು ವಿಶ್ವ ದಾಖಲೆಯ 247.5 ಸ್ಕೋರ್ ಮಾಡಿ ವಿಜಯಶಾಲಿಯಾದರು. ಕಿಮ್ 246.6 ಸ್ಕೋರ್ ಮಾಡಿ ಎರಡನೇ ಸ್ಥಾನ ಪಡೆದರು. ಶೌರ್ಯ 224.3ರೊಂದಿಗೆ ಮೂರನೇ ಸ್ಥಾನ ಪಡೆದರು.
ಭಾರತದ ಬ್ಯಾಡ್ಮಿಂಟನ್ ತಂಡವೂ ಸಹ ಫೈನಲ್‌ನಲ್ಲಿ ಜಪಾನ್ ತಂಡವನ್ನು 3-1ರಿಂದ ಸೋಲಿಸಿ ಚಿನ್ನ ಗೆದ್ದು ದೇಶಕ್ಕೆ ಡಬಲ್ ಸಂಭ್ರಮವನ್ನು ತಂದಿದೆ. ಭಾರತವು ಎರಡು ಚಿನ್ನ ಮತ್ತು ಒಂದು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಉಕ್ರೇನ್ 19 ಚಿನ್ನ, ಆರು ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.