ಬೆಂಗಳೂರು: ತೆರಿಗೆ ವಂಚನೆ ಮಾಹಿತಿ ಆಧರಿಸಿ ಬೆಂಗಳೂರು ಹಾಗೂ ಮುಂಬೈನ 30 ಕಡೆಗಳಲ್ಲಿ ದಾಳಿ ನಡೆಸಿರುವ ಕೇಂದ್ರದ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಅಧಿಕಾರಿಗಳು 3,200 ಕೋಟಿ ರೂ. ವಂಚನೆ ಹಣ ಪತ್ತೆ ಹಚ್ಚಿದ್ದಾರೆ. ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬನಿಗೆ ಶೋಧ ನಡೆಯುತ್ತಿದೆ.
ಡಿಜಿಜಿಐ ಬೆಂಗಳೂರು ವಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕಿ ಸುಚೇತಾ ಶ್ರೀಜೆಷಾ ನೇತೃತ್ವದಲ್ಲಿ ದಾಳಿ ನಡೆದಿದೆ.
ಆರೋಪಿಗಳು ನಕಲಿ ಕಂಪೆನಿಗಳನ್ನು ಸೃಷ್ಟಿಸಿ ವಂಚನೆಯಲ್ಲಿ ತೊಡಗಿರುವುದು ಬಯಲಾಗಿದೆ. ನಕಲಿ ಹೂಡುವಳಿ ತೆರಿಗೆ ಜಮೆ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ಮೂಲಕ 665 ಕೋಟಿ ರೂ. ಪಡೆದಿದ್ದಾರೆ. ನಕಲಿ ಇನ್‌ವಾಯ್ಸ್ ಸೃಷ್ಟಿಸಿ ಇಷ್ಟು ಮೊತ್ತದ ವಂಚನೆ ಎಸಗಿದ್ದಾರೆ ಎಂದು ಸುಚೇತಾ ತಿಳಿಸಿದ್ದಾರೆ.
ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಿಂದ ಅಧಿಕಾರಿಗಳು ನಕಲಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, 15 ನಕಲಿ ಕಂಪೆನಿಗಳನ್ನೂ ಪತ್ತೆ ಮಾಡಿದ್ದಾರೆ. ಈ ಪೈಕಿ 9 ಕಂಪೆನಿಗಳು ಷೇರುಪೇಟೆಯಲ್ಲೂ ನೋಂದಣಿಯಾಗಿವೆ ಎಂಬ ಭಯಾನಕ ಬೆಳವಣಿಗೆಯನ್ನೂ ಬಯಲಿಗೆಳೆದಿದ್ದಾರೆ.
ಈ ನಕಲಿ ಕಂಪೆನಿಗಳ ಪ್ರವರ್ತಕರು, ತಮ್ಮ ಕಂಪೆನಿಗಳು ಹೆಚ್ಚು ವ್ಯವಹಾರಗಳನ್ನು ಮಾಡುತ್ತಿವೆ ಎಂಬುದನ್ನು ತೋರಿಸಲು ದೊಡ್ಡ ಪ್ರಮಾಣದಲ್ಲಿ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸುತ್ತಿದ್ದರು. ಇದರೊಂದಿಗೆ ಈ ಕಂಪೆನಿಗಳ ಷೇರು ಬೆಲೆಗಳೂ ಹೆಚ್ಚಾಗುತ್ತಿದ್ದವು. ಷೇರುಗಳ ಬೆಲೆ ಹೆಚ್ಚಿದಂತೆ ಅವುಗಳನ್ನು ತಕ್ಷಣವೇ ಮಾರಾಟ ಮಾಡಿ, ಸಾಕಷ್ಟು ದುಡ್ಡು ಮಾಡಿ ಕಂಪೆನಿಗಳಿಂದಲೇ ಹೊರ ಬರುತ್ತಿದ್ದರು. ನಕಲಿ ಕಂಪೆನಿಗಳೆಂಬ ಅರಿವಿಲ್ಲದೆ ಇಂಥ ಕಂಪೆನಿಗಳ ಷೇರುಗಳಲ್ಲಿ ಹಣ ಹೂಡಿಕೆ ಮಾಡುವ ಜನ ಸಾಮಾನ್ಯರಿಗೆ ಈ ಮೂಲಕ ವಂಚನೆಯಾಗುತ್ತಿತ್ತು ಎಂಬ ವಿಚಾರ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬಹಿರಂಗಗೊಂಡಿದೆ.