ಮನೆ ಸುದ್ದಿ ಜಾಲ ರಾಜ್ಯದಲ್ಲಿ ಪಿಯು, ಡಿಗ್ರಿ ಕಾಲೇಜು ಪುನರಾರಂಭ: ಹೆಚ್ಚಿದ ಭದ್ರತೆ

ರಾಜ್ಯದಲ್ಲಿ ಪಿಯು, ಡಿಗ್ರಿ ಕಾಲೇಜು ಪುನರಾರಂಭ: ಹೆಚ್ಚಿದ ಭದ್ರತೆ

0

ಬೆಂಗಳೂರು: ಹಿಜಾಬ್-ಕೇಸರಿ ಶಾಲು  ವಿವಾದದ ಬೆನ್ನಲ್ಲೇ ರಾಜ್ಯದಾದ್ಯಂತ ಇಂದಿನಿಂದ ಪಿಯು ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಎಲ್ಲಾ ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. 

ವಿವಿಗಳು, ಕಾಲೇಜುಗಳಿಗೆ ಫೆ.16ರವರೆಗೆ ವಿಸ್ತರಿಸಿದ್ದ ರಜೆಯನ್ನು ರದ್ದುಪಡಿಸಿದ್ದ ಉನ್ನತ ಶಿಕ್ಷಣ ಇಲಾಖೆಯು ಫೆ.16ರಿಂದಲೇ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ, ಅನುದಾನಿಕ ಮತ್ತು ಅನುದಾನ ರಹಿತ ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಭೌತಿಕ ತರಗತಿ ಆರಂಭಿಸುವಂತೆ ಮಂಗಳವಾರ ಸುತ್ತೋಲೆ ಹೊರಡಿಸಿತ್ತು. ಇದರಂತೆ ಇಂದಿನಿಂದ ಪಿಯು ಹಾಗೂ ಪದವಿ ಕಾಲೇಜುಗಳು ಆರಂಭಗೊಂಡಿವೆ. 

ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಹೊತ್ತಿಕೊಂಡ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯದ ಇತರೆಡೆಗೂ ಹಬ್ಬುವುದು ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪ್ರೌಢಶಾಲೆ, ಪಿಯುಸಿ, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಫೆ.9ರಿಂದ 11ರವರೆಗೆ ರಜೆ ನೀಡಿತ್ತು. ಬಳಿಕ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿತ್ತು. ಪಿಯು ಕಾಲೇಜುಗಳಿಗೆ ಫೆ.15ರವರೆಗೆ ರಜೆ ಘೋಷಿಸಿತ್ತು. ಇದೀಗ ಆ ರಜೆ ಮುಕ್ತಾಯಗೊಂಡಿದ್ದು, ಎಂದಿನಂತೆ ಬುಧವಾರದಿಂದ ಕಾಲೇಜುಗಳು ಆರಂಭಗೊಂಡಿವೆ. ಇದರ ಜೊತೆಗೆ ವಿವಿಗಳು, ಪದವಿ ಹಾಗೂ ಮೇಲ್ಪಟ್ಟ ಎಲ್ಲಾ ಕಾಲೇಜುಗಳೂ ಆರಂಭಗೊಂಡಿವೆ. 

ನಿನ್ನೆಯಷ್ಟೇ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್’ನ ತ್ರಿಸದಸ್ಯ ಪೀಠ, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಸಂಕೇತ ಬಳಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಆದೇಶ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ‌ ನಗರದ ಆಯಾ ವಲಯಗಳಲ್ಲಿರುವ ಕಾಲೇಜುಗಳ ಮುಂದೆ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಡಿಪಿಪಿಗಳಿಗೆ ನಿರ್ದೇಶನ‌ ನೀಡಿತ್ತು. 

ಕಮಿಷನರ್ ನಿರ್ದೇಶನ ಹಿನ್ನೆಲೆಯಲ್ಲಿ‌ ತಮ್ಮ ವ್ಯಾಪ್ತಿಯಲ್ಲಿರುವ ಕಾಲೇಜು‌ ಆಡಳಿತ ಮಂಡಳಿಯವರ ಜತೆ ಸ್ಥಳೀಯ ಪೊಲೀಸರು ಸಭೆ ನಡೆಸಿದ್ದಾರೆ. 

ಧಾರ್ಮಿಕ ಸಂಕೇತವಿರುವ ಉಡುಪು ಧರಿಸಿ ವಿದ್ಯಾರ್ಥಿಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲೇಜು ಆವರಣದಲ್ಲಿ ಪ್ರತಿಭಟನೆ, ಗುಂಪುಗೂಡುವುದು ಸೇರಿದಂತೆ ಸಾಮೂಹಿಕ‌ವಾಗಿ ವಿದ್ಯಾರ್ಥಿಗಳು ಅನಗತ್ಯವಾಗಿ ಒಂದೆಡೆ ಸೇರುವುದು ಸೇರಿದಂತೆ ಇನ್ನಿತರ ಚಟುವಟಿಕೆಗೆ‌ ನಿರ್ಬಂಧ ವಿಧಿಸಬೇಕು.

ಶೈಕ್ಷಣಿಕ ಸಂಸ್ಥೆಗಳ ಮುಂದೆ 144 ಸೆಕ್ಷನ್ ಜಾರಿಯಲ್ಲಿದ್ದು, ಕಾಲೇಜು ಸುತ್ತಲಿನ 200 ಮೀಟರ್ ವ್ಯಾಪ್ತಿಯವರೆಗೂ ನಾಲ್ಕು ಜನಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.

ತರಗತಿ ಅವಧಿಯಲ್ಲಿ ಕಾಲೇಜುಗಳ ಮುಂದೆ ಅಗತ್ಯಗನುಣವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬರುವ ಕಾಲೇಜುಗಳ‌ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಲಾಗಿದೆ. ವದಂತಿಗಳಿಗೆ ಕಿವಿಗೊಡದಂತೆ ವಿದ್ಯಾರ್ಥಿಗಳಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಹಿಂದಿನ ಲೇಖನ`ಸವಾಲ್’ ಪತ್ರಿಕೆಯ ವರದಿ ಫಲಶ್ರುತಿ: ಆರೋಪಿಗಳಿಗೆ ಜೈಲೇ ಖಾಯಂ
ಮುಂದಿನ ಲೇಖನಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ