ಇಂಗ್ಲೆಂಡ್ ನಲ್ಲಿ ನಡೆದ ಟಿ20 ಚಾಂಪಿಯನ್ ಶಿಪ್ ಲೀಗ್ ನಲ್ಲಿ ಬರೋಬ್ಬರಿ 324 ರನ್ ಬಾರಿಸುವ ಮೂಲಕ ಸಸೆಕ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ.
ಮಿಡ್ಲ್ ಸೆಕ್ಸ್ 2ನೇ ಇಲೆವೆನ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಸೆಕ್ಸ್ 2ನೇ ಇಲೆವೆನ್ ತಂಡವು ಸ್ಪೋಟಕ ಬ್ಯಾಟಿಂಗ್ ನಡೆಸಿತು. ಎದುರಾಳಿ ಬೌಲರ್ ಗಳ ವಿರುದ್ಧ ಅಬ್ಬರಿಸಿದ ನಾಯಕ ರವಿ ಬೋಪರಾ ಕೇವಲ 12 ಭರ್ಜರಿ ಸಿಕ್ಸ್ ಹಾಗೂ 14 ಫೋರ್ ಸಿಡಿಸಿದರು.
ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಬೋಪಾರ ಬ್ಯಾಟ್ ನಿಂದ ಕೇವಲ 49 ಎಸೆತಗಳಲ್ಲಿ 144 ರನ್ ಮೂಡಿಬಂತು. ಮತ್ತೊಂದೆಡೆ ಟಾಮ್ ಅಲ್ಸೋಪ್ 27 ಎಸೆತಗಳಲ್ಲಿ 55 ರನ್ ಚಚ್ಚಿದರು. ಪರಿಣಾಮ 20 ಓವರ್ಗಳ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು ಸಸೆಕ್ಸ್ ತಂಡವು 324 ರನ್ ಪೇರಿಸಿತು.
325 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮಿಡ್ಲ್ಸೆಕ್ಸ್ ತಂಡವು ಕೇವಲ 130 ರನ್‌ಗಳಿಗೆ ಆಲೌಟ್ ಆದರು. ಇದರೊಂದಿಗೆ ಸಸೆಕ್ಸ್ ತಂಡವು 192 ರನ್ಗಳ ಬೃಹತ್ ಅಂತರದಿಂದ ಜಯ ಸಾಧಿಸಿದೆ.
ಇದರೊಂದಿಗೆ ಇಂಗ್ಲೆಂಡ್ ಕೌಂಟಿ ಟಿ20 ಕ್ರಿಕೆಟ್ ನಲ್ಲಿ 300+ ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಸಸೆಕ್ಸ್ ಸೆಕೆಂಡ್ ಇಲೆವೆನ್ ಪಾತ್ರವಾಗಿದೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ 300 ರನ್ ಗಳ ಹೊಸ ವಿಶ್ವ ದಾಖಲೆ ಕೂಡ ನಿರ್ಮಾಣವಾಗಿರುವುದು ವಿಶೇಷ.