ಬೆಂಗಳೂರು(Bengaluru): ವಿವಿಧ ಇಲಾಖೆಗಳಲ್ಲಿ ಕಾಮಗಾರಿಗೆ ಶೇ. 40 ರಷ್ಟು ಲಂಚ ಪಡೆಯುಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ದೂರು ನೀಡಿದರೆ ತನಿಖೆ ನಡೆಸಿ, ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮತ್ತೆ ಆರೋಪ ಮಾಡಿರುವ ಕುರಿತು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಆರೋಪ ಮಾಡಿದರೆ ಸಾಲದು. ದಾಖಲೆ ಸಹಿತ ಅವರು ದೂರು ಕೊಡಲಿ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಿಂದೆಯೂ ಆರೋಪ ಮಾಡಿದ್ದರು. ಪ್ರಧಾನಿಯವರಿಗೂ ಪತ್ರ ಬರೆದಿದ್ದರು. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿ ಅವರ ಅಹವಾಲು ಆಲಿಸಿದ್ದೆ. ಅವರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮಗಳನ್ನೂ ಕೈಗೊಂಡಿದ್ದೇನೆ ಎಂದರು.
ಯಾವುದೇ ಆರೋಪ ಮಾಡಿದರೂ ಆಧಾರಗಳನ್ನು ಒದಗಿಸಬೇಕು. ದಾಖಲೆಗಳನ್ನು ನೀಡದೇ ಆರೋಪ ಮಾಡಿದರೆ ಕ್ರಮ ಜರುಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.














