ಮನೆ ರಾಜಕೀಯ ‘ಶಕ್ತಿಧಾಮ’ಕ್ಕೆ 5 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

‘ಶಕ್ತಿಧಾಮ’ಕ್ಕೆ 5 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

0

ಮೈಸೂರು: ಶಕ್ತಿಧಾಮಕ್ಕೆ 5 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಮೈಸೂರಿನ ಶಕ್ತಿಧಾಮದಲ್ಲಿ ಇನ್‍ಫೋಸಿಸ್ ಪ್ರತಿಷ್ಠಾನ ವತಿಯಿಂದ ನಿರ್ಮಿಸಿರುವ ಇನ್‍ಫೋಸಿಸ್ ಬ್ಲಾಕ್ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ನಟ ಶಿವರಾಜ್ ಕುಮಾರ್ ಅವರೊಂದಿಗೆ ಶಕ್ತಿಧಾಮದ ಬಗ್ಗೆ  ಚರ್ಚೆ ಮಾಡಿದಾಗ ಸಂಸ್ಥೆಗಳಿಗೆ ಅನುದಾನ ನೀಡಬೇಕೆಂಬ ಪ್ರೇರಣೆ ದೊರೆತಿದ್ದಾಗಿ ತಿಳಿಸಿದ ಮುಖ್ಯಮಂತ್ರಿಗಳು ಶಕ್ತಿಧಾಮದ ಯಶಸ್ಸಿನಿಂದ ಇನ್ನಷ್ಟು ಸಂಸ್ಥೆಗಳು ಹುಟ್ಟಿ ಬರಲಿ ಎಂದು ಆಶಿಸಿದರು.

ಸಮಾಜದ ನೋವಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಶೋಷಿತರು, ದುರ್ಬಲರನ್ನು ಸಮಾಜ ಮತ್ತು ಸರಕಾರ ಕೈ ಹಿಡಿದು ನಿಲ್ಲಿಸಬೇಕು. ಪ್ರೀತಿ ವಿಶ್ವಾಸವನ್ನು ಸಮಾಜಕ್ಕೆ ಕೊಟ್ಟರೇ ಅದೇ ಪ್ರೀತಿ ಗೌರವ ನಮಗೆ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಳ್ಳೆಯದನ್ನೇ ಮಾಡಬೇಕು. ಒಳ್ಳೆಯದನ್ನೇ ಯೋಚಿಸಬೇಕೆಂದರು.

ಶಕ್ತಿಧಾಮ ಎಂಬುದು ಸರಿಯಾದ ಹೆಸರು. ಸ್ತ್ರೀ ಎಂದರೆ ಶಕ್ತಿ. ಭಗವಂತ ಸೃಷ್ಟಿ ಮಾಡುವ ಅಮೂಲ್ಯ ಗುಣವನ್ನು ಹೆಣ್ಣಿಗೆ ನೀಡಿದ್ದಾನೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಏನೆಲ್ಲಾ ಮಾಡಿದರೂ ಒಂದು ಮಗುವಿಗೆ ಜನ್ಮ ನೀಡುವ ಶಕ್ತಿಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಇಂದು ಸರಕಾರ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ. ಹಾಗಾಗಿ ಬಜೆಟ್‌ನಲ್ಲಿ ಇದಕ್ಕೆ ವಿಶೇಷ ನೆರವು ಘೋಷಿಸಲಾಗಿದೆ ಎಂದರು.

ನಮ್ಮ ಸರಕಾರ ಹೆಣ್ಣುಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜೊತೆಗೆ ಆರೋಗ್ಯ, ಶಿಕ್ಷಣಕ್ಕೆಂದೆ 40 ಸಾವಿರ ಕೋಟಿ ಮೀಸಲಿಡಲಾಗಿದೆ. ಆಸಿಡ್ ದಾಳಿಗೆ ಒಳಗಾದವರಿಗೆ 2 ಸಾವಿರ ಇದ್ದ ಸಹಾಯಧನವನ್ನು 10 ಸಾವಿರಕ್ಕೆ ವಿಸ್ತರಣೆ ಮಾಡಲಾಗಿದೆ. ಅಲ್ಲದೆ ನಿರಾಶ್ರಿತರಿಗೆ ಹೊಸ ಬದುಕು ಕಟ್ಟಿಕೊಡುತ್ತಿರುವ ಸಂಘಸಂಸ್ಥೆಗಳಿಗೂ ನಮ್ಮ ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.

ತಾಯಿ ಕರುಳನ್ನು ತೋರಿದ ಪೋಲಿಸ್ ಅಧಿಕಾರಿ ಕೆಂಪಯ್ಯ ಸಮಾಜದಲ್ಲಿ ಶೋಷಿತ ಹೆಣ್ಣು ಮಕ್ಕಳಿಗೆ ದಾರಿ ತೋರಲು ಡಾ: ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರಲ್ಲಿ ತಿಳಿಸಿದರು. ಶೋಷಿತ ವರ್ಗದ ಹೆಣ್ಣುಮಕ್ಕಳಿಗೆ ಆಶ್ರಯ, ಬದುಕು ನೀಡಬೇಕು ಎಂದು ಆಶ್ರಯದಾತ ಸಂಸ್ಥೆಯಾಗಿ ಶಕ್ತಿಧಾಮವನ್ನು ಡಾ: ರಾಜ್ ಕುಮಾರ್ ಅವರ ಕುಟುಂಬದವರು ಬೆಳೆಸಿದ್ದಾರೆ ಎಂದರು.

ಹಿಂದಿನ ಲೇಖನಪರೀಕ್ಷೆ ತಪ್ಪಿಸಿಕೊಳ್ಳಲು ಗೆಳೆಯನ ಜೊತೆ ಪರಾರಿಯಾಗಿದ್ದ ಬಾಲಕಿ ರಕ್ಷಣೆ
ಮುಂದಿನ ಲೇಖನಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಜನ್ಮದಿನದ ಸಂಭ್ರಮ