ಮನೆ ರಾಷ್ಟ್ರೀಯ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: 6 ಮಂದಿ ಸಾವು

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: 6 ಮಂದಿ ಸಾವು

0

ನವದೆಹಲಿ(Newdelhi): ನೇಪಾಳದಲ್ಲಿ ಮಂಗಳವಾರ ತಡರಾತ್ರಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮನೆ ಕುಸಿದು 6 ಮಂದಿ ಮೃತಪಟ್ಟಿದ್ದಾರೆ.

ಇನ್ನು ದುರ್ಘಟನೆಯಲ್ಲಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಜಿಲ್ಲೆಯ ಹಲವು ಕಡೆಗಳಲ್ಲಿ ಭೂಕಂಪನಕ್ಕೆ ಭೂಕುಸಿತವುಂಟಾಗಿ ಹತ್ತಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದೆ.

ನೇಪಾಳ ಗಡಿಯೊಂದಿಗೆ ಹೊಂದಿಕೊಂಡಿರುವ ಉತ್ತರಾಖಂಡದ ಪಿತೋರ್‌’ಗಢ್‌’ನ ಹಿಮಾಲಯ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಉತ್ತರ ಭಾರತದ ಹಲವೆಡೆ ಭೂಮಿ ನಡುಗಿದ ಅನುಭವವಾಗಿದೆ.

ಕಳೆದ 24 ಗಂಟೆಗಳಲ್ಲಿ ಮೂರು ಬಾರಿ ಭೂಕಂಪನವಾದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್‌’ಎಸ್‌ಸಿ) ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ 9:07 ಕ್ಕೆ (ಸ್ಥಳೀಯ ಕಾಲಮಾನ) 5.7 ತೀವ್ರತೆಯ ಮೊದಲ ಭೂಕಂಪನ ದಾಖಲಾಯಿತು. ನಂತರ ರಾತ್ರಿ 9:56 ಕ್ಕೆ (ಸ್ಥಳೀಯ ಕಾಲಮಾನ) 4.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇಂದು ಮುಂಜಾನೆ 2:12 AM (ಸ್ಥಳೀಯ ಕಾಲಮಾನ) ಸುಮಾರಿಗೆ 6.6 ತೀವ್ರತೆಯ ಮೂರನೇ ಕಂಪನ ಉಂಟಾಗಿದೆ.

10 ಕಿಮೀ ಆಳದಲ್ಲಿ ಭೂಕಂಪನ ಆಳದ ಕೇಂದ್ರವನ್ನು ಗುರುತಿಸಲಾಗಿದೆ. ಸುಮಾರು 81.06 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರದ ತಜ್ಞರು ತಿಳಿಸಿದ್ದಾರೆ.

ನೇಪಾಳದಲ್ಲಿ ಉಂಟಾದ ಭೂಕಂಪನದ ಪರಿಣಾಮ ಗಾಜಿಯಾಬಾದ್, ಗುರುಗ್ರಾಮ ಮತ್ತು ಲಖನೌದಲ್ಲೂ ಮಧ್ಯರಾತ್ರಿ ಭೂಮಿ ನಡುಗಿದ್ದರಿಂದ ಜನರು ಭೀತಿಗೊಳಗಾಗಿದ್ದಾರೆ.

ಭೂಕಂಪನ ಉಂಟಾಗಿರುವ ಬಗ್ಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಟ್ವೀಟ್ ಮಾಡಿದ್ದು, ಎಲ್ಲರೂ ಸುರಕ್ಷಿತರಾಗಿರಿ ಎಂದು ತಿಳಿಸಿದ್ದಾರೆ.

ಜತೆಗೆ ಹಲವರು ‌ಟ್ವೀಟ್ ಮಾಡಿ, ಭೂಮಿ ನಡುಗಿದ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ.