ಮನೆ ಅಪರಾಧ ಡೆಹ್ರಾಡೂನ್ ಮೂಲದ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆ!

ಡೆಹ್ರಾಡೂನ್ ಮೂಲದ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆ!

0

ಚಂಡೀಗಢ: ಸಾಲದ ಬಾಧೆ ತಾಳಲಾಗದೆ ಉತ್ತರಾಖಂಡದ ಡೆಹ್ರಾಡೂನ್ ಮೂಲದ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯ ಸೆಕ್ಟರ್ 27ರಲ್ಲಿ ನಡೆದಿದೆ. ಸೋಮವಾರ ರಾತ್ರಿ ಕಾರಿನಲ್ಲಿ ಈ ದುರ್ಘಟನೆ ನಡೆದಿದೆ.

ಮೃತರನ್ನು ಪ್ರವೀಣ್ ಮಿತ್ತಲ್ (42) ಹಾಗೂ ಅವರ ಪತ್ನಿ, ಪೋಷಕರು, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗು ಎಂದು ಗುರುತಿಸಲಾಗಿದೆ. ಈ ಕುಟುಂಬವು ಡೆಹ್ರಾಡೂನಿನಿಂದ ಹರಿಯಾಣದ ಪಂಚಕುಲಕ್ಕೆ ಬಂದಿದ್ದು, ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುವ ಸಂದರ್ಭದಲ್ಲಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ದಿನ ರಾತ್ರಿ, ಪಂಚಕುಲದ ಸೆಕ್ಟರ್ 27ರಲ್ಲಿ ಪಾರ್ಕ್ ಮಾಡಿದ್ದ ಕಾರಿನಲ್ಲಿ, ಆರು ಜನ ಅಸ್ವಸ್ಥರಾಗಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಕಾರಿನ ಪಕ್ಕದಲ್ಲಿದ್ದ ಪ್ರವೀಣ್ ಮಿತ್ತಲ್ ಅವರನ್ನು ಪ್ರಶ್ನಿಸಿದಾಗ ಅವರು, “ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ. ನನ್ನ ಕುಟುಂಬದ ಎಲ್ಲರೂ ವಿಷ ಸೇವಿಸಿದ್ದೇವೆ. ಇನ್ನು ಕೆಲ ನಿಮಿಷಗಳಲ್ಲಿ ನಾನು ಸಹ ಸಾಯುತ್ತೇನೆ” ಎಂದು ಹೇಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರ ಪ್ರಕಾರ, ಆರು ಮಂದಿ ಆಸ್ಪತ್ರೆಯಲ್ಲಿ ತಲುಪುವ ಮುನ್ನವೇ ಸಾವನ್ನಪ್ಪಿದ್ದು, ಕಾರಿನ ಪಕ್ಕದಲ್ಲಿದ್ದ ಪ್ರವೀಣ್ ಕೂಡ ಪ್ರಾಣಬಿಟ್ಟಿದ್ದಾರೆ.

ಪೊಲೀಸರು ಕಾರನ್ನು ಪರಿಶೀಲಿಸಿದಾಗ, ಅಲ್ಲಿ ಸಿಕ್ಕಿರುವ ಡೆತ್ ನೋಟ್‌ನಲ್ಲಿ “ಸಾಲದ ಬಾಧೆಯಿಂದ ಜೀವನ ತೀವ್ರ ಸಂಕಟಕರವಾಗಿದ್ದು, ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಡೆತ್ ನೋಟ್‌ ಆ ಕುಟುಂಬದ ಆಂತರಿಕ ವೇದನೆಯನ್ನು ತೋರಿಸುತ್ತದೆ.

ಈ ಕುರಿತು ಮಾತನಾಡಿದ ಡಿಸಿಪಿ ಹಿಮಾದ್ರಿ ಕೌಶಿಕ್, “ಘಟನೆಯ ಕುರಿತು ಪೊಲೀಸ್ ಇಲಾಖೆ ಪ್ರಾಥಮಿಕ ತನಿಖೆ ನಡೆಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣವನ್ನು ಹೆಚ್ಚಿನ ಸೂಕ್ಷ್ಮತೆಯಿಂದ ಪರಿಶೀಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಪಂಚಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.