ಮನೆ ಸ್ಥಳೀಯ ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ

0

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿತು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ತ್ರಿವರ್ಣ ಬಾವುಟದ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಗರ್ವಾಲ್ ರವರು, ರೈಲ್ವೆ ಪರಿವಾರ, ಮೌಲ್ಯಯುತ ಗ್ರಾಹಕರು ಮತ್ತು ರೈಲ್ವೆಗೆ ಸಂಬಂಧಿಸಿದ ಇತರರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ, ವಿವಿಧ ಕ್ಷೇತ್ರಗಳಲ್ಲಿ ವಿಭಾಗವು ಸಾಧಿಸಿರುವ ಗಮನಾರ್ಹ ಸಾಧನೆಗಳನ್ನು ಬಗ್ಗೆ ತಿಳಿಸಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ನಮ್ಮ ಪೂರ್ವಜರ ಮಹಾನ್ ಹೋರಾಟ ಮತ್ತು ತ್ಯಾಗವನ್ನು ನೆನಪಿಸಿಕೊಳ್ಳುವ ಮತ್ತು ಗೌರವಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ ಮತ್ತು ಅದು ಸೇವೆ ಸಲ್ಲಿಸುತ್ತಿರುವ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. 2022-23 ರ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು ಪ್ರಮುಖ ಕಾರ್ಯಕ್ಷಮತೆ ಸೂಚ್ಯಂಕಗಳ ನಿಯಮಗಳ ವಿಭಾಗದಲ್ಲಿ ಎಲ್ಲಾ ವಲಯ ರೈಲ್ವೆಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಇದು ಅವರ ಬದ್ಧತೆ ಮತ್ತು ವಿಭಾಗೀಯ ತಂಡದ ಕೆಲಸವನ್ನು ತೋರಿಸುತ್ತದೆ ಎಂದು ಅಗರ್ವಾಲ್ ತಿಳಿಸಿದರು.

ರೈಲ್ವೆ ಸಚಿವಾಲಯವು ಆಯೋಜಿಸಿದ ‘ಸ್ವಚ್ಛತಾ ಪಖ್ವಾಡಾ 2022’ ಸಮಯದಲ್ಲಿ ಇದು ಅತ್ಯುತ್ತಮ ಕಾರ್ಯಕ್ಷಮತೆಯ ರೈಲ್ವೆ ವಲಯ ಎಂದು ಕೂಡ ಗುರುತಿಸಲ್ಪಟ್ಟಿದೆ ಎಂದು ಅವರು ಹೇಳಿದರು.

ಅಗರ್ವಾಲ್ ರವರು ರೈಲುಗಳ ಕಾರ್ಯಾಚರಣೆಯ ಸುರಕ್ಷತೆಗೆ ವಿಭಾಗದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ರೈಲು ಕಾರ್ಯಾಚರಣೆಗಳಲ್ಲಿ ತೊಡಗಿರುವ ಎಲ್ಲಾ ಇಲಾಖೆಗಳ 100% ಮೇಲ್ವಿಚಾರಕರನ್ನು ಒಳಗೊಂಡಂತಹ  ವಿವಿಧ ಸುರಕ್ಷತಾ ವಿಚಾರ ಸಂಕಿರಣಗಳನ್ನು ವಿಭಾಗದಲ್ಲಿ ನಡೆಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ವಿಭಾಗಗಳ ಮುಂಚೂಣಿ ಸಿಬ್ಬಂದಿಗೆ ಸುರಕ್ಷಿತ ಕೆಲಸದ ಅಭ್ಯಾಸಗಳಲ್ಲಿ ಚೆನ್ನಾಗಿ ಪರಿಣತೆ ನೀಡಲು ಮೊಟ್ಟಮೊದಲ ಬಾರಿಗೆ ‘ಆನ್‌ಲೈನ್ ಸುರಕ್ಷತಾ ಸೆಮಿನಾರ್‌’ಗಳನ್ನು ಸಹ ನಡೆಸಲಾಯಿತು. ಜೊತೆಯಲ್ಲಿ 1583 ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳನ್ನು ತಲುಪಲು SMS ಆಧಾರಿತ ಸುರಕ್ಷತಾ ಅಭಿಯಾನವನ್ನು ಸಹ ಪ್ರಾರಂಭಿಸಲಾಯಿತು.

ಮೈಸೂರು ವಿಭಾಗವು ವಿಪತ್ತು ನಿರ್ವಹಣೆ ಮತ್ತು ಸನ್ನದ್ಧತೆಯ ಬಗ್ಗೆಯೂ ಗಮನಹರಿಸಿದೆ. ಎನ್‌ ಡಿಆರ್‌ ಎಫ್, ಎಸ್‌ ಡಿಆರ್‌ ಎಫ್, ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ರಾಜ್ಯ ಪೊಲೀಸ್ ಮತ್ತು ಇತರ ಸಂಸ್ಥೆಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಮೆಗಾ ಅಣಕು ಕಾರ್ಯಾಚರಣೆಯನ್ನೂ ಸಹ ಆಯೋಜಿಸಲಾಗಿತ್ತು. ವಿಭಾಗವು ಸುರಕ್ಷತೆಯ ಅಸಾಧಾರಣ ಸಮರ್ಪಣೆಗಾಗಿ 75 ಸಿಬ್ಬಂದಿಗಳಿಗೆ ಪ್ರಶಸ್ತಿ ಸಹ ನೀಡಿದೆ.

ಮೂಲಸೌಕರ್ಯ ಮತ್ತು ಸಂಪರ್ಕಗಳ ಅಭಿವೃದ್ಧಿ ಕಾರ್ಯಗಳು ವಿಭಾಗದ ಸಾಧನೆಗಳಲ್ಲಿ ಮುಂಚೂಣಿಯಲ್ಲಿವೆ. ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ಸಂಪರ್ಕಿಸುವ ಮೈಸೂರು ವಿಭಾಗದ ಮುಖ್ಯ ಮಾರ್ಗದ ಹಳಿಗಳ ಪೂರ್ಣ ಉದ್ದವನ್ನೂ ಸಂಪೂರ್ಣವಾಗಿ ದ್ವಿಪಥಗೊಳಿಸಲಾಗಿದೆ ಮತ್ತು ವಿದ್ಯುದ್ದೀಕರಿಸಲಾಗಿದೆ. ನೈಋತ್ಯ ವಲಯದ ಧಾರವಾಡ-ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ರಾಜ್ಯದ ಎರಡನೇ ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲಿಗೆ ಇತ್ತೀಚೆಗೆ ಪ್ರಧಾನಮಂತ್ರಿಗಳು ಚಾಲನೆ ನೀಡಿದರು. ಈ ವಿಭಾಗವು ಒಂದೇ ವರ್ಷದಲ್ಲಿ 474 ರೂಟ್ ಕಿಲೋಮೀಟರ್‌ ಗಳ ಅತ್ಯಧಿಕ ವಿದ್ಯುದೀಕರಣವನ್ನು ದಾಖಲಿಸಿದ್ದೂ, ಇದು ಇಡೀ ಭಾರತೀಯ ರೈಲ್ವೆ ವಿದ್ಯುದ್ದೀಕರಣದ ಸುಮಾರು 7.2% ರಷ್ಟಿದೆ.

ವಿಭಾಗವು ತನ್ನ ಅತ್ಯುನ್ನತ ಪ್ರಾಮುಖ್ಯತೆಯಾದ ಪ್ರಯಾಣಿಕರ ಭದ್ರತೆಯ ಮೇಲಿನ ಕಾಳಜಿಯನ್ನು ಮುಂದುವರೆಸಿದೆ. 132 ಕ್ಕೂ ಹೆಚ್ಚು ಸಂದರ್ಭಗಳಲ್ಲಿನ ಸುಮಾರು 35.34 ಲಕ್ಷ ರೂಪಾಯಿಗಳ ಮೌಲ್ಯದ ಕಳೆದುಹೋದ ಪ್ರಯಾಣಿಕರ ವಸ್ತುಗಳನ್ನು ಅವುಗಳ ನಿಜವಾದ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ‘ಆಪರೇಷನ್ ನನ್ಹೆ ಫರಿಶ್ತೆಹ್’ ಮತ್ತು ‘ಆಪರೇಷನ್ ನೈಟ್ ಹಾಕ್’ ಅಡಿಯಲ್ಲಿ ಹಲವಾರು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

ಮೈಸೂರು ವಿಭಾಗದ ರೈಲುಗಳು ಜುಲೈ 2023 ರವರೆಗೆ 96% ರಷ್ಟು ಉತ್ತಮವಾದ ಕಾರ್ಯಕ್ಷಮತೆಯೊಂದಿಗೆ ಸಮಯಪಾಲನೆ ಮಾಡಿದ್ದೂ, ಇದು ನೈಋತ್ಯ ವಲಯದಲ್ಲಿಯೇ ಅತ್ಯಧಿಕವಾಗಿದೆ. ರೈಲು ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ವಿವಿಧ ರೈಲುಗಳಲ್ಲಿ ಹೆಚ್ಚುವರಿ ಕೋಚ್‌ ಗಳನ್ನು ಅಳವಡಿಸಲಾಗಿದೆ ಮತ್ತು ಪ್ರಯಾಣಿಕರ ಅನುಕೂಲಗಳನ್ನು ಹೆಚ್ಚಿಸಲು ರೈಲು ನಿಲ್ದಾಣಗಳಲ್ಲಿ ವಿವಿಧ ಸೌಕರ್ಯಗಳನ್ನು ಉನ್ನತ್ತೀಕರಿಸಲಾಗಿದೆ.

ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ವಿಭಾಗವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ರೈಲುಗಳ ವಿದ್ಯುದೀಕರಣ ಕಾರ್ಯಾರಂಭವು ಗಣನೀಯ ಇಂಧನ ಉಳಿತಾಯಕ್ಕೆ ಕಾರಣವಾಗಿದೆ. ಭಾರತೀಯ ರೈಲ್ವೆಯಲ್ಲಿ ಮೊದಲ ಬಾರಿಗೆ, ಎಕ್ಸ್‌ ಪ್ರೆಸ್ ರೈಲುಗಳಲ್ಲಿ ‘ಪಾಯಿಂಟ್-ಟು-ಪಾಯಿಂಟ್ ಆನ್-ಬೋರ್ಡ್ ಹೌಸ್ ಕೀಪಿಂಗ್’ ಸೇವೆಗಳನ್ನು ಪರಿಚಯಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕೇಂದ್ರಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ನಡೆಸಿದೆ ಮತ್ತು ಸಾವಯವ ತ್ಯಾಜ್ಯ ಸಂಯೋಜಕಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಮೈಸೂರು ರೈಲು ನಿಲ್ದಾಣವು ‘ಈಟ್ ರೈಟ್ ಸ್ಟೇಷನ್’ ಎಂದು ಪ್ರಮಾಣೀಕರಿಸಲ್ಪಟ್ಟಿದೆ.

ಶಿಲ್ಪಿ ಅಗರ್ವಾಲ್,  ಮಾನ್ಯತೆ ಪಡೆದಿರುವ ಕಾರ್ಮಿಕ ಸಂಘ ಮತ್ತು ಸಂಸ್ಥೆಗಳಿಗೆ ಅವುಗಳ ಸಹಕಾರ ಮತ್ತು ಕೊಡುಗೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಹಲವಾರು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳುವಲ್ಲಿನ ಪ್ರಯತ್ನಗಳಿಗಾಗಿ ನೈಋತ್ಯ ರೈಲ್ವೆಯ ಮಹಿಳಾ ಕಲ್ಯಾಣ ಸಂಸ್ಥೆ (SWRWWO) ಮತ್ತು ಮೈಸೂರು ವಿಭಾಗದ ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು ಅವರು ಶ್ಲಾಘಿಸಿದರು.

ಹಿರಿಯ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳನ್ನು ಅವರ ಪಾತ್ರ ಹಾಗು ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಶ್ಲಾಘಿಸಿದರು.

ಸುರಕ್ಷತೆ, ಮೂಲಸೌಕರ್ಯ ಅಭಿವೃದ್ಧಿ, ಪ್ರಯಾಣಿಕರ ಅನುಕೂಲ ಮತ್ತು ಪರಿಸರ ಸುಸ್ಥಿರತೆಯ ಮೇಲೆ ಹೆಚ್ಚಿನ ಗಮನವನ್ನು ಕೊಡುವ ಮೂಲಕ ವಿಭಾಗವು ತನ್ನ ಕಾರ್ಯಕ್ಷಮತೆಯನ್ನು ನಿರಂತರವಾಗಿ ಸುಧಾರಿಸಲು ಆಶಿಸುತ್ತಿದೆ ಎಂದು ವಿಭಾಗೀಯ ವ್ಯವಸ್ಥಾಪಕರು ತಿಳಿಸಿದರು.

ಹಿಂದಿನ ಲೇಖನಸಂವಿಧಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು: ಗೃಹ ಸಚಿವ ಜಿ.ಪರಮೇಶ್ವರ್
ಮುಂದಿನ ಲೇಖನನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಬ್ರಿಟಿಷರ ಏಜೆಂಟರ ಬಗ್ಗೆ ಎಚ್ಚರವಿರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ