ಮನೆ ರಾಜ್ಯ ರಾಜ್ಯದಲ್ಲೆಡೆ 77ನೇ ಗಣರಾಜ್ಯೋತ್ಸವದ ಸಂಭ್ರಮ-ಸಡಗರ; ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ..!

ರಾಜ್ಯದಲ್ಲೆಡೆ 77ನೇ ಗಣರಾಜ್ಯೋತ್ಸವದ ಸಂಭ್ರಮ-ಸಡಗರ; ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ..!

0

ಬೆಂಗಳೂರು : ಇಂದು ದೇಶದೆಲ್ಲೆಡೆ 77ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ನಾಡಿನ ವಿವಿಧ ಜಿಲ್ಲೆಗಳಲ್ಲಿ ಆಯಾಯ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ದು, ಗೌರವ ವಂದನೆ ಸ್ವೀಕರಿಸಿದ್ದಾರೆ. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಕಣ್ತುಂಬಿಕೊಂಡಿದ್ದಾರೆ. ಯಾವ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬ ಹೇಗಿತ್ತು ಅಂತಾ ನೋಡೋದಾದ್ರೆ…

ರಾಯಚೂರು – 77ನೇ ಗಣರಾಜ್ಯೋತ್ಸವವನ್ನು ರಾಯಚೂರಿನಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ವಿದ್ಯಾರ್ಥಿಗಳು, ಕವಾಯತ್ ತಂಡಗಳಿಂದ ಆಕರ್ಷಕ ಪರೇಡ್ ನಡೆಯಿತು. ತೆರೆದ ವಾಹನದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಪರೇಡ್ ತಂಡಗಳ ಪರಿವೀಕ್ಷಣೆ ನಡೆಸಿ ಪರೇಡ್ ತಂಡಗಳು ಹಾಗೂ ಸಾರ್ವಜನಿಕರಿಂದ ಗೌರವ ವಂದನೆ ಸ್ವೀಕರಿಸಿದರು.

ಅಲ್ಲದೇ 77ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಯಚೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ವೇಳೆ ವಿವಿಧ ಶಾಲಾ ಮಕ್ಕಳು ಅದ್ಭುತ ಪ್ರದರ್ಶನಗಳನ್ನು ನೀಡಿದರು. ಮಾನ್ವಿಯ ಬಲ್ಲಟಗಿಯ ಬಸವೇಶ್ವರ ಶಾಲೆ ಮಕ್ಕಳು ಮಲ್ಲಗಂಬದ ಪ್ರದರ್ಶನ ನೀಡಿ ನೆರೆದಿದ್ದವರನ್ನ ನಿಬ್ಬೆರಗಾಗುವಂತೆ ಮಾಡಿದರು. ವಿದ್ಯಾರ್ಥಿಗಳ ಮಲ್ಲಗಂಬ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಪುಟ್ಟಪುಟ್ಟ ಮಕ್ಕಳು ಸಹ ಭಾಗವಹಿಸಿ ಮಲ್ಲಗಂಬದ ಆಕರ್ಷಕ ಪ್ರದರ್ಶನ ನೀಡಿದ್ದು ಬೆರಗಾಗುವಂತೆ ಮಾಡಿತು.

ಹಾವೇರಿ – ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಇಲಾಖೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಗೌರವ ವಂದನೆ ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್ ಜಿಲ್ಲೆಯ ಜನರಿಗೆ 77ನೇ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು.

ಬೀದರ್ – ಗಡಿ ಜಿಲ್ಲೆ ಬೀದರ್‌ನಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬೀದರ್ ನಗರದ ನೆಹರು ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಖಂಡ್ರೆ ಧ್ವಜಾರೋಹಣ ನೆರವೇರಿಸಿದ್ದು, ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಪೊಲೀಸ್ ತುಕಡಿಗಳು, ವಿದ್ಯಾರ್ಥಿಗಳು, ಕವಾಯತ್ ತಂಡಗಳಿಂದ ಆಕರ್ಷಕ ಪಥ ಸಂಚಲನ ಮಾಡಿದ್ದು, ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತ ಗೀತೆಗೆ ನೃತ್ಯ ಮಾಡಿ ಗಮನಸೆಳೆದರು.

ವಿಜಯಪುರ – ವಿಜಯಪುರ ಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಆಕರ್ಷಕ ಪಥಸಂಚಲನವನ್ನು ವಿಕ್ಷಿಸಿದರು.

ಧಾರವಾಡ – ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಗಣರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಧ್ವಜಾರೋಹಣದ ನಂತರ ಜಿಲ್ಲಾ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಅಲ್ಲದೇ ಸಚಿವ ಸಂತೋಷ ಲಾಡ್ ಅವರು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.