ವಕ್ಫ್ ಆಸ್ತಿ ವಿಚಾರವಾಗಿ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಅದರ ಸಂಬಂಧ ನೀಡಿರುವ ಪೊಲೀಸ್ ನೋಟಿಸ್ ರದ್ದುಪಡಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ನವೆಂಬರ್ 16ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಕೋರಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಬೊಮ್ಮಾಯಿ ಪರವಾಗಿ ವಕೀಲ ಶಿವಪ್ರಸಾದ್ ಶಾಂತನಗೌಡರ್ ವಕಾಲತ್ತು ಹಾಕಿದ್ದಾರೆ.
“ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್ಫ್ ಆಸ್ತಿ ಎನ್ನುವಂತಾಗಿದೆ; ಭೋವಿ ಸಮಾಜದವರಿಗೆ ಮನೆ ನಿರ್ಮಾಣ ಮಾಡಬೇಕು ಎಂದು ಮೂರು ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಜಾಗವನ್ನೂ ವಕ್ಫ್ ಆಸ್ತಿ ಎನ್ನುತ್ತಾರೆ” ಎಂದು ಬಸವರಾಜ ಬೊಮ್ಮಾಯಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದ ಹಿನ್ನೆಲೆ: ವಕ್ಫ್ ಆಸ್ತಿ ವಿಚಾರವಾಗಿ ಸಂಸದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ಶಾಸಕ ಅರವಿಂದ್ ಬೆಲ್ಲದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಮತ್ತು ಮಾಜಿ ಶಾಸಕ ಅರುಣ್‌ಕುಮಾರ್ ಪೂಜಾರ್ ಅವರು ನವೆಂಬರ್ 4ರಂದು ಸವಣೂರಿನ ಭರಮದೇವರ ಸರ್ಕಲ್ ಬಳಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
“ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್ಫ್ ಆಸ್ತಿ ಎನ್ನುವಂತಾಗಿದೆ; ಭೋವಿ ಸಮಾಜದವರಿಗೆ ಮನೆ ನಿರ್ಮಾಣ ಮಾಡಬೇಕು ಎಂದು ಮೂರು ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಜಾಗವನ್ನೂ ವಕ್ಫ್ ಆಸ್ತಿ ಎನ್ನುತ್ತಾರೆ” ಎಂದು ಬೊಮ್ಮಾಯಿ ಹೇಳಿರುವುದಾಗಿ ದೂರು ದಾಖಲಿಸಲಾಗಿದೆ.
ಸಿ ಟಿ ರವಿ ಅವರು “ನಮಗೆ ಸಂವಿಧಾನ ದೊಡ್ಡದೋ ಅಥವಾ ಶರಿಯಾ ಕಾನೂನು ದೊಡ್ಡದೋ? ರೈತರ ಜಮೀನು, ದೇವಸ್ಥಾನಗ ಕೆರೆಗಳ ಜಾಗವನ್ನು ವಕ್ಫ್ ಹೆಸರಿನಲ್ಲಿ ನೋಂದಾಯಿಸುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರ ಶರಿಯಾ ಕಾನೂನು ಇಲ್ಲಿ ನಡೆಯಲ್ಲ. 1,600 ವರ್ಷಗಳ ಹಿಂದೆ ನಿರ್ಮಿಸಿರುವ ಸೋಮೇಶ್ವರ ದೇವಸ್ಥಾನ ನಮ್ಮದು ಎನ್ನುತ್ತಿದ್ದಾರೆ. ಇವರಿಗೆ ಯಾವುದರಲ್ಲಿ ಹೊಡೆಯಬೇಕು” ಎಂದು ಕೇಳಿದ್ದರು ಎನ್ನಲಾಗಿದೆ. ಮುಂದುವರಿದು, “1947ರಲ್ಲಿ ಸಾಬರಿಗೆ ಪಾಕಿಸ್ತಾನ, ಹಿಂದೂಗಳಿಗೆ ಇಂಡಿಯಾ ಕೊಟ್ಟು ಲೆಕ್ಕ ಚುಕ್ತಾ ಮಾಡಲಾಗಿದೆ. ಆದರೂ, ನಮ್ಮ ರೈತರ ಜಮೀನು, ದೇವಸ್ಥಾನ ಬೇಕಂತೆ” ಎಂದು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು ಗುಪ್ತ ಮಾಹಿತಿ ಸಂಗ್ರಹಿಸುವ ಪೇದೆ ಮಂಜುನಾಥ ಮಣ್ಣಿಯವರ್ ಸವಣೂರು ಠಾಣಾಧಿಕಾರಿಗೆ ನವೆಂಬರ್ 4ರಂದು ದೂರು ನೀಡಿದ್ದರು.
ಇದರ ಅನ್ವಯ ಎಲ್ಲರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 196(1)(a) ಅಡಿ ಪ್ರಕರಣ ದಾಖಲಿಸಲಾಗಿದೆ. ಬಿಎನ್‌ಎಸ್‌ಎಸ್ ಸೆಕ್ಷನ್ 35 (3) ಅಡಿ ನವೆಂಬರ್ 7ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ.