ಮೈಸೂರು: ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಪ್ರಸ್ತಾಪ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಅನೇಕರು ಕೇಳಿದ್ದಾರೆ. ಉಪಚುನಾವಣೆ ಬಳಿಕ ನೋಡೋಣ ಎಂದಿದ್ದೇನೆ. ಅದನ್ನೇ ಸಂಪುಟ ಪುನಾರಚನೆ ಎಂದು ಬಿಂಬಿಸಬೇಡಿ ಎಂದು ಹೇಳಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ್ದು ಸಾಬೀತಾದರೆ ರಾಜಕೀಯವನ್ನೇ ಬಿಡುತ್ತೇನೆ. ಒಂದೇ ಒಂದು ಪೈಸೆ ಭ್ರಷ್ಟಾಚಾರ ಮಾಡಿದ್ದರೆ ರಾಜಕೀಯ ಬಿಡುತ್ತೇನೆ. ನರೇಂದ್ರ ಮೋದಿ ಪ್ರಧಾನಿ ಸ್ಥಾನ ತ್ಯಜಿಸುತ್ತಾರಾ ಕೇಳಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಭ್ರಷ್ಟಾಚಾರ ಎಂದು ಬರೀ ಸುಳ್ಳು ಹೇಳುತ್ತಿದ್ದಾರೆ. ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ? ಪ್ರಧಾನಿ ಮೋದಿಗೆ ಕರ್ನಾಟಕ ಹಾಗೂ ಸಿದ್ದರಾಮಯ್ಯ ಟಾರ್ಗೆಟ್. ಕರ್ನಾಟಕ ಅತಿ ದೊಡ್ಡ ರಾಜ್ಯ, ಇಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸರ್ಕಾರದ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ವಿಚಾರವಾಗಿ ಕೆಲವರು ಮನವಿ ಸಲ್ಲಿಸಿದ್ದಾರೆ. ಆದರೆ ಮೀಸಲಾತಿ ನೀಡುವ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಬಿಜೆಪಿ ಕೋಮುವಾದದ ಹಿನ್ನೆಲೆಯಲ್ಲಿ ವಿವಾದ ಮಾಡುತ್ತಿದೆ. ಬಿಜೆಪಿ ನಾಯಕರಿಗೆ ಶಾಂತಿ ಸೌಹಾರ್ದತೆ ಕೆಡಿಸುವುದೇ ಕೆಲಸ. ಹೀಗಾಗಿ ಇದು ವಿವಾದವಾಗುತ್ತಿದೆ ಅಷ್ಟೇ ಎಂದು ಸಿದ್ದರಾಮಯ್ಯ ದೂರಿದರು.
ನನ್ನ ಬಗ್ಗೆ ಹೆಚ್ಡಿ ದೇವೇಗೌಡರು ಸೊಕ್ಕು ಮುರಿಯುತ್ತೇನೆ, ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿಯೇ ಎಂದು ಅವರು ಪ್ರತಿ ಪ್ರಶ್ನೆ ಮಾಡಿದರು. ಜಮೀರ್ ಮತ್ತು ಕುಮಾರಸ್ವಾಮಿ ಹಿಂದಿನಿಂದಲೂ ಒಳ್ಳೆಯ ಸ್ನೇಹಿತರು. ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ. ಆ ವಿಚಾರದ ಬಗ್ಗೆ ಜಮೀರ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದೆಲ್ಲವೂ ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಆದೇಶ ಹಿಂಪಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆ ರೀತಿಯ ಪ್ರಸ್ತಾವ ಇಲ್ಲ ಎಂದರು. ಸಂಪುಟದಲ್ಲಿ ಆ ವಿಚಾರದ ಬಗ್ಗೆ ಚರ್ಚೆಯೇ ನಡೆದಿಲ್ಲ. ಡಿಸಿಎಂ ಹೇಳಿದ್ದರೆ ಅವರ ಬಳಿಯೇ ಕೇಳಿ ಎಂದರು.
ಮುಂದಿನ ಅವಧಿಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂಬ ಶಾಸಕ ಅನಿಲ್ ಚಿಕ್ಕಮಾಧು ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಹೇಳಿಕೆ, ಅದರ ಬಗ್ಗೆ ಏನೂ ಹೇಳಲ್ಲ ಎಂದರು.