ವಿಚ್ಛೇದಿತ ದಂಪತಿಯ ಮಗುವನ್ನು ಯಾರ ಸುಪರ್ದಿಗೆ ವಹಿಸಬೇಕು ಎಂಬ ವಿಚಾರದಲ್ಲಿ ನಡೆದ ತುರುಸಿನ ವಾದ ಪ್ರತಿವಾದದ ನಡುವೆ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ ಮುಹಮ್ಮದ್ದ್ ಮುಸ್ತಾಕ್ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ನಿಯಮಾವಳಿಗಳಲ್ಲಿ ಲಿಂಗ ತಟಸ್ಥತೆಯ ಕೊರತೆಯನ್ನು ಪ್ರಸ್ತಾಪಿಸಿದರು.
ಮಗುವಿನ ತಂದೆಯ ವಿರುದ್ಧ ಹಳೆಯದೊಂದು ಅತ್ಯಾಚಾರ ಆರೋಪವಿದೆ ಎಂಬ ವಿಚಾರ ಪ್ರಸ್ತಾಪವಾದಾಗ ತಂದೆಯ ಪರ ವಕೀಲರು ತಮ್ಮ ಕಕ್ಷೀದಾರ ಜಾಮೀನಿನ ಮೇಲೆ ಹೊರಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗಿತ್ತು ಎಂದರು.
ಈ ಮಾತು ಅತ್ಯಾಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 376 ಬಗ್ಗೆ ಪ್ರತಿಕ್ರಿಯಿಸಲು ನ್ಯಾ. ಮುಸ್ತಾಕ್ ಅವರಿಗೆ ಪ್ರೇರಣೆಯೊದಗಿಸಿತು.
“ಸೆಕ್ಷನ್ 376 ಲಿಂಗ-ತಟಸ್ಥ ನಿಯಮವಲ್ಲ. ಮದುವೆಯ ಸುಳ್ಳು ಭರವಸೆಯಡಿಯಲ್ಲಿ ಮಹಿಳೆ ಪುರುಷನನ್ನು ಮೋಸಗೊಳಿಸಿದರೆ, ಆಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ. ಆದರೆ ಅದೇ ಅಪರಾಧಕ್ಕಾಗಿ ಪುರುಷನನ್ನು ವಿಚಾರಣೆಗೆ ಒಳಪಡಿಸಬಹುದಾಗಿದೆ. ಇದು ಯಾವ ರೀತಿಯ ಕಾನೂನು? ಇದು ಲಿಂಗ ತಟಸ್ಥವಾಗಿರಬೇಕು” ಎಂದು ನ್ಯಾಯಮೂರ್ತಿ ಮುಸ್ತಾಕ್ ಮೌಖಿಕವಾಗಿ ಅಭಿಪ್ರಾಯಪಟ್ಟರು.
ಕೆಲ ದಿನಗಳ ಹಿಂದೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನೇ ಈ ಮಾತು ಧ್ವನಿಸುತ್ತದೆ. ಮಹಿಳೆ ಕೈಗೊಳ್ಳುವ ನಿರ್ಧಾರದ ಸ್ವಾಯತ್ತತೆಯನ್ನು ಉಲ್ಲಂಘಿಸಿದ್ದಾಗ ಮಾತ್ರ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕತೆಗೆ ತೊಡುಗುವುದು ಅತ್ಯಾಚಾರವಾಗುತ್ತದೆ ಎಂದು ತೀರ್ಪು ತಿಳಿಸಿತ್ತು.
ಅತ್ಯಾಚಾರಕ್ಕೆ ಲಿಂಗ ತಟಸ್ಥ ನಿಯಮ ಐಪಿಸಿಯಲ್ಲಿ ಇಲ್ಲದಿರುವುದರಿಂದ ನ್ಯಾಯಾಲಯ ಪ್ರಬಲ ಅಧೀನ ಪಾತ್ರಗಳ ವಿಚಾರದಲ್ಲಿ ಆರೋಪಿ ಮತ್ತು ಮಹಿಳೆಯ ನಡುವಿನ ಸಂಬಂಧದ ಸ್ಥಿತಿಯನ್ನು ಅಳೆಯಬೇಕಾಗುತ್ತದೆ ಎಂದು ಅದು ಹೇಳಿತು.
“ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಅರ್ಥೈಸಲಾಗಿರುವ ಅತ್ಯಾಚಾರದ ಅಪರಾಧದ ಶಾಸನಬದ್ಧ ನಿಬಂಧನೆಗಳು ಲಿಂಗ ತಟಸ್ಥವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಮಹಿಳೆ ಪುರುಷನೊಬ್ಬನನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧದಲ್ಲಿ ತೊಡಗಿದರೆ ಅದು ಅತ್ಯಾಚಾರದಡಿ ಶಿಕ್ಷೆ ಆಗದು. ಆದರೆ ಪುರುಷನೊಬ್ಬ ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧಕ್ಕೆ ಮುಂದಾದರೆ ಅದು ಅತ್ಯಚಾರ ಪ್ರಕರಣವಾಗುತ್ತದೆ. ಹೀಗಾಗಿ (ಈ) ಕಾನೂನು ಪುರುಷನೇ ಸದಾ ಮಹಿಳೆಯ ಇಚ್ಛೆಯ ವಿರುದ್ಧ ಪ್ರಾಬಲ್ಯ ಸಾಧಿಸುವ ಸ್ಥಿತಿಯಲ್ಲಿ ಇರುತ್ತಾನೆ ಎಂಬ ಊಹೆಯೊಂದನ್ನು ಸೃಷ್ಟಿಸುತ್ತದೆ. ಆದ್ದರಿಂದ ಲೈಂಗಿಕ ಕ್ರಿಯೆಯಲ್ಲಿನ ಪ್ರಬಲ ಮತ್ತು ಅಧೀನ ಸಂಬಂಧಕ್ಕೆ ತಳಕು ಹಾಕಿ ಸಮ್ಮತಿಯನ್ನು ಅರ್ಥೈಸಬೇಕಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.