ಮನೆ ರಾಜ್ಯ ಸನ್ಮಾನವಷ್ಟೇ ಸಾಲದು, ವಿದ್ಯಾರ್ಥಿಗಳ ಓದಿಗೂ ನೆರವಾಗಿ: ಆಶಾಲತಾ ಪುಟ್ಟೇಗೌಡ

ಸನ್ಮಾನವಷ್ಟೇ ಸಾಲದು, ವಿದ್ಯಾರ್ಥಿಗಳ ಓದಿಗೂ ನೆರವಾಗಿ: ಆಶಾಲತಾ ಪುಟ್ಟೇಗೌಡ

0

ಶ್ರೀರಂಗಪಟ್ಟಣ: ರಾಜ್ಯೋತ್ಸವದ ದಿನ ಓದುವ ಮಕ್ಕಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರೆ ಸಾಲುವುದಿಲ್ಲ, ಅವರ ಮುಂದಿನ ಓದಿಗೆ ಸಂಘ ಸಂಸ್ಥೆಗಳು ನೆರವಾಗಬೇಕು ಎಂದು ಶ್ರೀರಂಗಪಟ್ಟಣದ ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಕರೆ ನೀಡಿದರು.

Join Our Whatsapp Group

ಶ್ರೀರಂಗಪಟ್ಟಣದ ಹನುಮಂತನಗರದಲ್ಲಿ ಸುಭಾಷ್ ಚಂದ್ರ ಬೋಸ್ ಯುವಕರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಪಠ್ಯ ಪುಸ್ತಕಗಳನ್ನು ಮಾತ್ರ ಕೊಡುತ್ತಾರೆ. ಬರೆಯುವ ಪುಸ್ತಕಗಳನ್ನು ಕೊಡುವುದಿಲ್ಲ. ಪ್ರತಿಭಾವಂತ ಬಡ ಮಕ್ಕಳಿಗೆ ಪುಸ್ತಕ ಕೊಂಡುಕೊಳ್ಳುವುದು ಕಷ್ಟ. ಅಂತಹ ಮಕ್ಕಳಿಗೆ ನಮ್ಮ ಸಮಾಜದ ವತಿಯಿಂದ ಸಹಾಯ ಮಾಡುತಿದ್ದೇವೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

ಉಪನ್ಯಾಸಕಿ ಡಾ.ಸಿ.ಕೆ.ಮಮತಾ ಮಾತನಾಡಿ, ಮಂಡ್ಯದಲ್ಲಿ 87ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇದರಲ್ಲಿ ಪ್ರಪಂಚದ ಎಲ್ಲಾ ಕಡೆಯ ಕನ್ನಡ ಸಾಧಕರು ಭಾಗವಹಿಸುತ್ತಿದ್ದಾರೆ. ಇದು ಕನ್ನಡದ ದೊಡ್ಡ ಇತಿಹಾಸವನ್ನು ಸಾರುವಂತಹ ಕಾರ್ಯಕ್ರಮ. ಇಂತಹ ಸುಸಂದರ್ಭದಲ್ಲಿ ಉತ್ತಮ ಸಂಘಟಿತ ಸುಭಾಷ್ ಚಂದ್ರ ಬೋಸ್ ಸಂಘವು ಹತ್ತನೇ ವಾರ್ಷಿಕೋತ್ಸವ ಮತ್ತು 69ನೇ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುತ್ತಿರುವುದು ಖುಷಿಯ ಸಂಗತಿ. ಸಂಘದ ಸಮಾಜಮುಖಿ ಕಾರ್ಯಕ್ರಮಗಳು ಹೀಗೇ ಮುಂದುವರಿಯಲಿ ಎಂದು ಆಶಿಸಿದರು.

ಕಡತನಾಳು ಸಮರ್ಪಣಾ ಟ್ರಸ್ಟಿನ ಅಧ್ಯಕ್ಷ ಕೆ ಎಸ್ ಜಯಶಂಕರ್ ಮಾತನಾಡಿ, ಕುವೆಂಪು ಹೇಳುವಂತೆ ಸರ್ವ ಜನಾಂಗದ ಶಾಂತಿಯ ತೋಟ ಈ ನಮ್ಮ ಶ್ರೀರಂಗಪಟ್ಟಣದ ಹನುಮಂತನಗರ ಗ್ರಾಮ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸೇರಿ ಕನ್ನಡ ರಾಜ್ಯೋತ್ಸವ ಆಚರಣೆ ಬಹಳ ಖುಷಿ ಕೊಡುತ್ತಿದೆ ಎಂದರು.

ಸುಭಾಷ್ ಚಂದ್ರ ಬೋಸ್ ಸಂಘದ ವತಿಯಿಂದ ಸತತವಾಗಿ 10 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಸಂಘದಿಂದ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರಗಳು ಮುಂತಾದ ಅರಿವು ಕಾರ್ಯಗಾರಗಳು ನಡೆಯುತ್ತಿರುವುದು ಖುಷಿಯ ವಿಚಾರ ಎಂದು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಸವಿತಾ ಜಗದೀಶ್, ಗ್ರಾಮ ಪಂಚಾಯತಿ ಸದಸ್ಯರಾದ ಜವರೇಗೌಡ, ಪ್ರೀತಿ ಜನಾರ್ಧನ್, ಚೌಡಮ್ಮ ಅನಿತಾ, ಸಂಘದ ಪದಾಧಿಕಾರಿಗಳಾದ ಬೈರೇಶ್, ವೆಂಕಟೇಶ್‌, ಚೇತನ್, ಹರೀಶ್, ವಕೀಲ ಹರೀಶ್, ಸದಸ್ಯರಾದ ಶೌಕತ್‌, ಮಹೇಶ್, ಆನಂದ್, ಲೋಕೇಶ್, ವಿನೋದ್ ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.