ಮಡಿಕೇರಿ: ರಾಯಚೂರು ಜಿಲ್ಲೆಯಲ್ಲಿ ನಡೆದ ರೀತಿಯಲ್ಲೇ ಹಾಸನದಲ್ಲೂ ಪಕ್ಷದ ಬಾವುಟದ ಅಡಿಯಲ್ಲೇ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಶೋಷಿತ ವರ್ಗಗಳು, ಮೈನಾರಿಟಿ, ಹಿಂದುಳಿದ ವರ್ಗಗಳು ಹಾಗೂ ಬಡವರ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳ ಸಿದ್ದರಾಮಯ್ಯನವರ ವಿರುದ್ದ ವಿರೋಧ ಪಕ್ಷಗಳು ಕುತಂತ್ರ ಮಾಡುತ್ತಿದ್ದಾರೆ. ಅವರ ಅಪಪ್ರಚಾರದ ವಿರುದ್ದ ಸಿಎಂ ಅವರನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದ ಈ ಸಮಾವೇಶವನ್ನು ಅಹಿಂದ ಸಮುದಾಯ ಆಯೋಜಿಸಿದ್ದು, ಪಕ್ಷದ ಬ್ಯಾನರ್ ಅಡಿಯಲ್ಲೇ ಸಮಾವೇಶ ನಡೆಯಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಪ್ರತಿಕ್ರಿಯಿಸಿದರು .
ಇಂದು ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರೀತಿಯಲ್ಲೇ ಪಕ್ಷದ ಬ್ಯಾನರ್ ಹಾಗೂ ಬಾವುಟದ ಅಡಿಯಲ್ಲಿಯೇ ಈ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಹಿಂದ ಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಅಹಿಂದ ಸಮುದಾಯದ ಧ್ವನಿಯಾಗಿರುವ ಸಿದ್ದರಾಮಯ್ಯನವರ ವಿರುದ್ದ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಕುತಂತ್ರಗಳ ವಿರುದ್ದ ಧ್ವನಿ ಎತ್ತುವುದು. ಶೋಷಿತ ವರ್ಗಗಳ ಹಿತಾಸಕ್ತಿ ಕಾಪಾಡುತ್ತಿರುವ ಸಿದ್ದರಾಮಯ್ಯನವರಿಗೆ ಹಾಗೂ ಡಿಸಿಎಂ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಇನ್ನಷ್ಟು ಬಲವನ್ನು ನೀಡುವುದು ಈ ಸಮಾವೇಶದ ಉದ್ದೇಶವಾಗಿದೆ. ಮೈಸೂರು ವಿಭಾಗ ಜಿಲ್ಲೆಯಲ್ಲಿ ನಡೆಯಬೇಕು ಎನ್ನವ ಉದ್ದೇಶದಿಂದ ಹಾಸನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ಅದರಲ್ಲೂ ಸಾಂವಿಧಾನಾತ್ಮಕ ಹುದ್ದೆಯಲ್ಲಿರುವ ವಿರೋಧ ಪಕ್ಷದ ನಾಯಕರಾದ ಅಶೋಕ್ ಅವರು ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ದಿ ವಿಷಯಗಳು ಜನರ ಗಮನಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಇಲ್ಲಸಲ್ಲದ ಹೇಳಿಕೆಗಳನ್ನು, ಆರೋಪಗಳನ್ನು ದಿನನಿತ್ಯ ಮಾಡುತ್ತಿದ್ದಾರೆ. ಇದು ಬಿಜೆಪಿಯಲ್ಲಿರುವ ಆಂತರಿಕ ಗುಂಪುಗಳ ಮಧ್ಯೆ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ಎಂದರು.
ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗುವ ಕಾಯಿದೆಗಳು ಹಾಗೂ ವಿರೋಧ ಪಕ್ಷಗಳು ಎತ್ತುವ ಆರೋಪಗಳಿಗೆ ಸಮರ್ಥವಾಗಿ ಉತ್ತರ ನೀಡಲು ಸಿದ್ದರಿರಬೇಕು ಎನ್ನುವ ಸೂಚನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಎಲ್ಲ ಸಚಿವರಿಗೂ ಸಚಿವ ಸಂಪುಟ ಸಭೆಯಲ್ಲಿ ಸಹಜವಾಗಿ ಸೂಚಿಸಿದ್ದಾರೆಯೇ ಹೊರತು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದ ನಾಯಕರು ಪ್ರತಿನಿತ್ಯ ಬೇಜವಾಬ್ದಾರಿಯಿಂದ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನಾತ್ಮಕ ಸ್ಥಾನದಲ್ಲಿರುವ ವ್ಯಕ್ತಿ ನಡೆದುಕೊಳ್ಳುವ ರೀತಿ ಇದಲ್ಲ. ಸಂವಿಧಾನದ ರಕ್ಷಕರು ಎಂದು ತಮ್ಮ ಬೆನ್ನನ್ನು ತಾವೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ತಟ್ಟಿಕೊಳ್ಳುತ್ತಾರೆ. ಸಂವಿಧಾನವನ್ನು ವಿರೋಧಿಸಿ ಬೇರೆ ಯಾರೇ ಹೇಳಿಕೆ ನೀಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಅಶೋಕ್ ಅವರು ಮೊದಲು ಹೇಳಿಕೆ ನೀಡುತ್ತಿದ್ದರು. ಆದರೆ, ಸಂವಿಧಾನದ ವಿರುದ್ದವಾಗಿ ಹೇಳಿಕೆ ನೀಡಿ ಈಗಾಗಲೇ ಈ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸ್ವಾಮೀಜಿಯವರ ವಿಷಯದಲ್ಲಿ ಮಾತ್ರ ಜಾತಿಯನ್ನು ಮಧ್ಯಕ್ಕೆ ತರುತ್ತಾರೆ. ಕಾಂಗ್ರೆಸ್ ನವರು ಸಂವಿಧಾನ ವಿರೋಧಿಗಳು ಎಂದು ಆರೋಪಿಸುವ ಇವರು, ಸಂವಿಧಾನ ಉಳಿಸುವ ಕ್ರಮ ಕೈಗೊಂಡರೆ ಇಂತಹ ಹೇಳಿಕೆ ನೀಡುವುದು ಹಾಸ್ಯಾಸ್ಪದ. ಇವರಿಗೆ ರಾಜ್ಯದ ಅಭಿವೃದ್ದಿ ಬಗ್ಗೆ ಆಗಲಿ, ಶಾಂತಿ ಸೌಹಾರ್ದತೆ ಬಗ್ಗೆ ಯಾವುದೇ ಕಲ್ಪನೆಗಳಿಲ್ಲ. ಕೇವಲ ಮಾಧ್ಯಮಗಳ ಮುಂದೆ ಆರೋಪ ಮಾಡುವುದೇ ಕೆಲಸವನ್ನಾಗಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು.
ಕುಮಾರಸ್ವಾಮಿ ಅವರು ತಮ್ಮ ಮಗನನ್ನ ಉಪಚುನಾವಣೆಯಲ್ಲಿ ಸ್ಪರ್ಧೇಗಿಳಿಸುತ್ತಾರೆ ಎನ್ನುವುದು ಯೋಗೀಶ್ವರ್ ಹಾಗೂ ಬಿಜೆಪಿ, ಜೆಡಿಎಸ್ ನಾಯಕರುಗಳಿಗೆ ಮೂರು ತಿಂಗಳ ಹಿಂದೆಯೇ ತಿಳಿದಿತ್ತು. ವಿರೋಧ ಪಕ್ಷದ ನಾಯಕರಾದ ಅಶೋಕ್ ಒಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ನಿಖಿಲ್ ಗೆಲ್ಲುವುದು ಬೇಕಾಗಿರಲಿಲ್ಲ. ನಿಖಿಲ್ ಗೆದ್ದಿದ್ದರೆ ಬಿಜೆಪಿ ಹೈಕಮಾಂಡ್‌ನ್ನು ಕುಮಾರಸ್ವಾಮಿಯವರು ಓವರ್ ಟೇಕ್ ಮಾಡಿ ರಾಜ್ಯದಲ್ಲಿ ಬಿಜೆಪಿಯನ್ನು ಮುಗಿಸಿಯೇ ಬಿಡುತ್ತಾರೆ ಎನ್ನುವ ಭಯ ಬಿಜೆಪಿ ನಾಯಕರನ್ನು ಕಾಡುತ್ತಿತ್ತು. ಅದಕ್ಕಾಗಿಯೇ, ಡಿಕೆಶಿಯವರು ಬಿಜೆಪಿಯ ಹಲವರೇ ನಮಗೆ ಸಹಾಯ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದು. ನಮಗೂ ಬಿಜೆಪಿಯಲ್ಲಿ ಮಿತ್ರರಿದ್ದಾರೆ ಎಂದರು.