ಶೈಕ್ಷಣಿಕ ಮನೋವಿಜ್ಞಾನದಲ್ಲಿ ಕಲಿಕೆಯ ವರ್ಗಾವಣೆ ಎಂಬ ಸಿದ್ಧಾಂತ ಬರುತ್ತದೆ ಕಲಿಕೆಯನ್ನು ಸುಲಭಗೊಳಿಸಿಕೊಳ್ಳಲು ಈ ಸಿದ್ಧಾಂತವನ್ನು ಅನ್ವಯಿಸಿಕೊಳ್ಳುವುದರಿಂದ ಉಪಯೋಗವಾಗುತ್ತದೆ. ಇದರಲ್ಲಿ ಕೌಶಲ್ಯಗಳಿಗೆ ಸಂಬಂಧಪಟ್ಟ ವಿಚಾರವು ತಾನೇ ತಾನಾಗಿ ಅನ್ವಯವಾಗುತ್ತದೆ. ಉದಾಹರಣೆಗೆ ಬೈಸಿಕಲ್ ರೈಟಿಂಗ್ ತಿಳಿದಿದ್ದರೆ ಬೈಕ್
ರೈಡಿಂಗ್ ಅಭ್ಯಾಸ ಮಾಡುವುದು ಸುಲಭವಾಗುತ್ತದೆ. ಸೈಕಲ್ ರೈಡಿಂಗ್ ನ ಕೌಶಲವು ತಾನೇ ತಾನಾಗಿ ಬೈಕ್ ಅಭ್ಯಾಸ ಮಾಡಲು ಸಹಾಯವಾಗಿ ಬರುತ್ತದೆ. ಇದು ಕಲಿಕಾ ವರ್ಗಾವಣೆಯೇ. ಆದರೆ ಕಲಿಕಾ ವರ್ಗಾವಣೆಯೇ. ಸಿದ್ಧಾಂತದ ತಿಳಿವಳಿಕೆ ಇಲ್ಲದಿದ್ದರೂ ಈ ರೀತಿಯ ಕಲಿಕಾ ವರ್ಗಾವಣೆಯು ನಡೆಯುತ್ತದೆ. ಆದರೆ ಬೌದ್ಧಿಕ ವಿಚಾರಕ್ಕೆ ಬಂದಾಗ ಕಲಿಕಾ ವರ್ಗಾವಣೆ ಸರಿಯಾಗಿ ನಡೆಯಬೇಕಾದರೆ ಕಲಿಕಾ ವರ್ಗಾವಣೆಯನ್ನು ಹೇಗೆ ಮಾಡಿಕೊಳ್ಳಬೇಕೆಂಬುದು ನಮಗೆ ಗೊತ್ತಿದ್ದರೆ ಅನುಕೂಲವಾಗುತ್ತದೆ. ಒಂದು ವಿಷಯವನ್ನು ಕಲಿಯಲು ಇನ್ನೊಂದು ವಿಷಯದ ಕಲಿಕೆಯು ಸಹಾಯಕವಾಗಿ ಬಂದಿದ್ದರೆ ಅದು ಧನಾತ್ಮಕ ಕಲಿಕಾ ವರ್ಗಾವಣೆ ಎನಿಸಿಕೊಳ್ಳುತ್ತದೆ, ಟೈಪಿಂಗ್ ಗೊತ್ತಿದ್ದರೆ ಕಂಪ್ಯೂಟರ್ ಕಲಿಯುವುದು ಸುಲಭವಾಗುವ ಹಾಗೆ. ಋಣಾತ್ಮಕ ಕಲಿಕಾ ವರ್ಗಾವಣೆ ಎಂದರೆ ಒಂದು ಕಲಿಕೆಗೆ ಇನ್ನೊಂದು ಕಲಿಕೆಯು ತೊಂದರೆಯಾಗಿ ಬರುವುದು, ಹೊಸವರ್ಷ ಬಂದರೂ ಹಳೆಯ ಇಸವಿಯನ್ನು ಬರೆಯುವ ಹಾಗೆ. ಬಹಳ ಮುಖ್ಯವಾದ ಕಲಿಕಾ ವರ್ಗಾವಣೆಯ ತತ್ವವೆಂದರೆ ಕ್ರಮಾನುಗತ ಕಲಿಕಾ ವರ್ಗಾವಣೆ. ಅಂದರೆ ಕಲಿಕಾಂಶಗಳ ನಡುವೆ ಸಂಬಂಧವಿದ್ದು ಹಿಂದಿನ ಕಲಿಕಾಂಶದ ಆಧಾರದಲ್ಲಿ ಅದರ ಅಭಿವೃದ್ಧಿ ಹೊಂದಿದ ರೂಪದಲ್ಲಿ ಮುಂದಿನ ಕಲಿಕಾಂಶವನ್ನು ಕಲಿಯುವುದು. ಉದಾಹರಣೆಗೆ ಕೂಡಿಸುವ ಲೆಕ್ಕದ ನಂತರ ಭಾಗಿಸುವ ಲೆಕ್ಕವನ್ನು ಕಲಿಯಬಾರದು. ಕೂಡಿಸುವ ಲೆಕ್ಕಕ್ಕೆ ಕ್ರಮಾನುಗತ ಸಂಬಂಧವಿರುವುದು ಕಳೆಯುವುದು. ಎರಡನೆಯ ಮಹಾಯುದ್ಧವನ್ನು ಅಭ್ಯಾಸಮಾಡಿದ ನಂತರ ವಿಶ್ವಸಂಸ್ಥೆಯ ಬಗ್ಗೆ ಅಭ್ಯಾಸ ಮಾಡಬೇಕು. ಯಾಕೆಂದರೆ ಅವು ಕ್ರಮಾನುಗತ ಸಂಬಂಧವನ್ನು ಹೊಂದಿವೆ.
ಕಲಿಕಾ ವರ್ಗಾವಣೆಗೆ ಕೆಲವು ಪ್ರಮೇಯಗಳೂ ಇವೆ. ಆದರ್ಶಗಳ ಪ್ರಮೇಯವೆಂದರೆ ಒಂದು ಉದ್ದೇಶಕ್ಕಾಗಿ ಕಲಿತದ್ದು ಉಳಿದೆಲ್ಲಕ್ಕೂ ಅನ್ವಯವಾಗುತ್ತಾ ಹೋಗುವುದು. ಉದಾಹರಣೆಗೆ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಅಭ್ಯಾಸವಾದರೆ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಅಭ್ಯಾಸವಾಗುತ್ತದೆ. ಮಾನಸಿಕ ಶಿಸ್ತಿನ ಪ್ರಮೇಯದ ಪ್ರಕಾರ ನಮ್ಮ ಮಾನಸಿಕ ಸಾಮರ್ಥ್ಯವನ್ನು, ಧಾರಣಾ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಂಡರೆ ಕಲಿಕಾ ಸಾಮರ್ಥ್ಯವು ಜಾಸ್ತಿಯಾಗುತ್ತದೆ. ಈ ಕಲಿಕಾ ವರ್ಗಾವಣೆಯ ತಿಳಿವಳಿಕೆ ನಮಗಿದ್ದರೆ ಒಂದು ಸಂದರ್ಭದಲ್ಲಿ ಕಲಿತದ್ದನ್ನು ಇನ್ನೊಂದು ಸಂದರ್ಭಕ್ಕೆ ಅನ್ವಯಿಸಿಕೊಂಡು ಕಲಿಕೆಯನ್ನು ವಿಸ್ತರಿಸಿಕೊಳ್ಳಬಹುದು.














