ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸತತ 11ನೇ ಬಾರಿಯೂ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರಿಸುವ ನಿರ್ಧಾರ ಕೈಗೊಂಡಿರುವುದಾಗಿ ಶುಕ್ರವಾರ ತಿಳಿಸಿದೆ.
ಅತಿಯಾದ ಹಣದುಬ್ಬರ ಮತ್ತು ಪ್ರಸಕ್ತ ಆರ್ಥಿಕ ವರ್ಷದ ಹಣಕಾಸು ಪ್ರಗತಿಯ ಗುರಿ ಮುಟ್ಟುವ ಹಿನ್ನೆಲೆಯಲ್ಲಿ ರೆಪೋ ದರದಲ್ಲಿ ಈ ಹಿಂದಿನಂತೆ ಶೇ.6.5ರಲ್ಲೇ ಮುಂದುವರಿಸುವ ತೀರ್ಮಾನ ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಮಿತಿ ಸಭೆ ನಡೆದಿದ್ದು, ಶುಕ್ರವಾರ (ಡಿ. 06) ಬೆಳಗ್ಗೆ ಮುಕ್ತಾಯಗೊಂಡಿತ್ತು.
ಇತ್ತೀಚೆಗಿನ ವರ್ಷಗಳಲ್ಲಿ ಜಗತ್ತಿನಲ್ಲಿ ಒಂದರ ನಂತರ ಮತ್ತೊಂದು ಬಿಕ್ಕಟ್ಟು ಉದ್ಭವಿಸುತ್ತಲೇ ಇದೆ. ಆದರೆ ಭಾರತದ ಆರ್ಥಿಕತೆ ಬಲಿಷ್ಠವಾಗುತ್ತಿದೆ. ಆದರೂ ನಾವು ಜಾಗತಿಕ ಮಟ್ಟದ ಬೆಳವಣಿಗೆ ಬಗ್ಗೆ ತೀವ್ರ ನಿಗಾ ಇರಿಸಬೇಕಾದ ಅಗತ್ಯವಿದೆ ಎಂದು ದಾಸ್ ಹೇಳಿದರು.