ಮನೆ ಕಾನೂನು ಕೋವಿಡ್‌ ನಿಂದ ಅನಾಥವಾದ ಮಗುವಿನ ಪಾಲನೆ: ತಾಯಿಯ ಚಿಕ್ಕಮ್ಮನಿಗಿಂತಲೂ ತಂದೆ ಕಡೆಯ ಅಜ್ಜ- ಅಜ್ಜಿ ಮೇಲು...

ಕೋವಿಡ್‌ ನಿಂದ ಅನಾಥವಾದ ಮಗುವಿನ ಪಾಲನೆ: ತಾಯಿಯ ಚಿಕ್ಕಮ್ಮನಿಗಿಂತಲೂ ತಂದೆ ಕಡೆಯ ಅಜ್ಜ- ಅಜ್ಜಿ ಮೇಲು ಎಂದ ಸುಪ್ರೀಂ

0

ಮೊಮ್ಮಕ್ಕಳೊಂದಿಗೆ ಅಜ್ಜ ಅಜ್ಜಿಯಂದಿರು ಹೆಚ್ಚು ಗಾಢ ನಂಟು ಹೊಂದಿರುವುದರಿಂದ ಮೊಮ್ಮಗನ ಪಾಲನೆಯ ಸುಪರ್ದಿಗೆ ತಾಯಿಯ ಕಡೆಯ ಚಿಕ್ಕಮ್ಮನಿಗಿಂತ ತಂದೆಯ ಕಡೆಯ ಅಜ್ಜ ಅಜ್ಜಿಯಂದಿರು ಹೆಚ್ಚು ಅರ್ಹರು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಮಗುವಿನೊಂದಿಗೆ ಗಾಢ ಸಂಬಂಧ ಹೊಂದಿರುವ ಅಜ್ಜ- ಅಜ್ಜಿಯರ ಹಕ್ಕುಗಳನ್ನು ನಿರಾಕರಿಸಲು ಆದಾಯವು ಏಕೈಕ ಮಾನದಂಡವಾಗಬಾರದು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ತಾಯಿಯ ಚಿಕ್ಕಮ್ಮನಿಗೆ ನೀಡಲಾಗಿದ್ದ ಪಾಲನೆಯ ಜವಾಬ್ದಾರಿ ರದ್ದುಗೊಳಿಸಿ, ತಂದೆಯ ಕಡೆಯ ಅಜ್ಜ ಅಜ್ಜಿಯರಿಗೆ ಮಗುವಿನ ಪಾಲನೆಯ ಹೊಣೆಗಾರಿಕೆ ನೀಡಿತು.

ನಮ್ಮ ಸಮಾಜದಲ್ಲಿ ತಂದೆಯ ಕಡೆಯ ಅಜ್ಜ- ಅಜ್ಜಿಯಂದಿರು ಮೊಮ್ಮಗನನ್ನು ಸದಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರು ಮೊಮ್ಮಕ್ಕಳೊಂದಿಗೆ ಹೆಚ್ಚು ಭಾವನಾತ್ಮಕವಾಗಿ ಬೆರೆಯುತ್ತಾರೆ. ತಾಯಿಯ ಚಿಕ್ಕಮ್ಮನೂ ಬೆರೆಯಬಹುದು. ಆದರೆ ತಂದೆಯ ಕಡೆಯವರೆಂದರೆ ತಂದೆಯ ಕಡೆಯವರೇ” ಎಂದು ನ್ಯಾಯಾಲಯ ಹೇಳಿತು. ಎರಡೂ ಕಡೆಯವರು ತಮ್ಮ ವೈಮನಸ್ಸು ತೊರೆಯುವಂತೆಯೂ ಪೀಠ ಇದೇ ವೇಳೆ ಒತ್ತಾಯಿಸಿತು.

ಕೋವಿಡ್‌ ಸಾಂಕ್ರಾಮಿಕದ ವೇಳೆ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ ಆರು ವರ್ಷದ ಬಾಲಕನ ಪಾಲನೆಯ ಸಮಸ್ಯೆಯನ್ನು ಪ್ರಕರಣ ಒಳಗೊಂಡಿತ್ತು. ಮಗುವನ್ನು ತಾಯಿಯ ಅಂತಿಮ ಸಂಸ್ಕಾರಕ್ಕೆಂದು ತಂದೆಯ ಕಡೆಯವರು ಕರೆದುಕೊಂಡು ಹೋಗಿದ್ದರು. ಅಂದಿನಿಂದ ಮಗು ಅವರ ಸುಪರ್ದಿನಲ್ಲೇ ಇತ್ತು.

ಅಜ್ಜ- ಅಜ್ಜಿ ಪಿಂಚಣಿ ಹಣದಲ್ಲಿ ಬದುಕುತ್ತಿದ್ದು ಚಿಕ್ಕಮ್ಮ ಕೇಂದ್ರ ಸರ್ಕಾರಿ ನೌಕರರಾಗಿದ್ದುದರಿಂದ ಆಕೆಗೆ ಮಗುವಿನ ಪಾಲನೆಯ ಜವಾಬ್ದಾರಿ ನೀಡಬೇಕು ಎಂದು ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಈ ಮೂಲಕ ರದ್ದುಗೊಳಿಸಿತು.

“ತಂದೆಯ ಅಜ್ಜ ಅಜ್ಜಿಯರ ಸುಪರ್ದಿಗೆ ಮಗುವನ್ನು ನೀಡದೆ ಇರಲು ಕೇವಲ ಆದಾಯವೊಂದೇ ಏಕೈಕ ಮಾನದಂಡ ಹಾಗೂ ಸಕಾರಣ ಆಗಲಾರದು. ತಾಯಿಯ ಚಿಕ್ಕಮ್ಮನಿಗೆ ನೀಡಲಾಗಿದ್ದ ಮಗುವಿನ ಸುಪರ್ದಿನ ಹೊಣೆಯನ್ನು ರದ್ದುಪಡಿಸಲಾಗಿದ್ದು ಮಗುವು ತಂದೆಯ ಅಜ್ಜಅಜ್ಜಿಯರ ಜೊತೆ ಇರಲಿದೆ,” ಎಂದು ಪೀಠವು ಹೇಳಿತು.

ಹಿಂದಿನ ಲೇಖನಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುತ್ತೀರಾ ?: ಸಿದ್ದರಾಮಯ್ಯ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ
ಮುಂದಿನ ಲೇಖನಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ ಅಸಿಂಧು ಮಾಡುವಂತೆ ದೂರು