ಬೆಳಗಾವಿ, ಡಿ.10: ರಾಜ್ಯದ 7ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದ ನಾಯಕ ರಾಜ್ಯದ 10ನೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಅವರು, ಬೆಂಗಳೂರು ನಗರಕ್ಕೆ ಸಿಲಿಕಾನ್ ಸಿಟಿ ಎಂಬ ಖ್ಯಾತಿ ಬರಲು ಕಾರಣರಾದ ದೂರದರ್ಶಿತ್ವದ ನಾಯಕ ಎಸ್.ಎಂ. ಕೃಷ್ಣ ಅವರು 7 ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದ ಮೇರು ನಾಯಕ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ನಿನ್ನೆ ತಾವು ವಿಧಾನಸಭೆಯಲ್ಲಿ ಅನುಭವ ಮಂಟಪದ ಬಗ್ಗೆ ಮಾತನಾಡುವಾಗ 2002ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಮ್ಮತಿಸಿದ್ದನ್ನು ಸ್ಮರಿಸಿದ್ದೆ. ಆದರೆ ಅವರು ಇಂದು ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಕೇಳಿ ತೀವ್ರ ನೋವಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ವೈಯಕ್ತಿಕ ರಾಗ ದ್ವೇಷಕ್ಕೆ ಆಸ್ಪದವಿಲ್ಲದೆ ಕಾರ್ಯ ನಿರ್ವಹಿಸಿದ ಎಸ್.ಎಂ. ಕೃಷ್ಣ ಅವರು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದವರು. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಅವರು ತಮ್ಮದೇ ಆದ ಪರಿಕಲ್ಪನೆ ಇಟ್ಟುಕೊಂಡಿದ್ದರು.ಹೀಗಾಗಿಯೇ ಅವರು ತಮ್ಮ ದೂರದರ್ಶಿತ್ವದಿಂದ ಈ ನಾಡಿನಲ್ಲಿ ಅಳಿಸಲಾರದ ಛಾಪು ಮೂಡಿಸಿದ್ದರು ಎಂದು ತಿಳಿಸಿದ್ದಾರೆ.
ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ, ಮುಖ್ಯಮಂತ್ರಿಗಳಾಗಿ ಹಾಗೂ ಸಂಸತ್ ಸದಸ್ಯರಾಗಿ, ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಈ ನಾಡಿಗೆ ಅನುಪಮ ಕೊಡುಗೆ ನೀಡಿರುವ ಎಸ್.ಎಂ. ಕೃಷ್ಣ ಅವರನ್ನು ಕರ್ನಾಟಕ ಮತ್ತು ಕರುನಾಡಿನ ಜನರು ಮರೆಯಲು ಸಾಧ್ಯವೇ ಇಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸಂಯಮ, ತಾಳ್ಮೆ, ಸಜ್ಜನಿಕೆಗೆ ಹೆಸರಾಗಿದ್ದ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹಲವು ಸವಾಲುಗಳನ್ನು ಎದುರಿಸಿದರು, ಆದರೆ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದರು ಎಂದು ತಿಳಿಸಿದ್ದಾರೆ.