ಬೆಳಗಾವಿ, ಡಿಸೆಂಬರ್ 10: ಪ್ರವರ್ಗ ‘2ಎ’ ಮೀಸಲಾತಿಗೆ ಆಗ್ರಹಿಸಿ, ಸುವರ್ಣ ವಿಧಾನಸೌಧ ಬಳಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಜನಸಾಗರವೇ ಹರಿದುಬರುತ್ತಿದ್ದು, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ವಿವಿಧೆಡೆಯಿಂದ ಬರುತ್ತಿರುವ ಟ್ರ್ಯಾಕ್ಟರ್ ಗಳನ್ನು ಹಿರೇಬಾಗೇವಾಡಿ ಬಳಿಯೇ ತಡೆಯಲಾಗಿದೆ. ಹಾಗಾಗಿ ಜನರು ಕಾಲ್ನಡಿಗೆ ಮೂಲಕವೇ ಪ್ರತಿಭಟನಾ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಒಬ್ಬೊಬ್ಬರೇ ನಾಯಕರು ಬಂದು ಭಾಗಿಯಾಗುತ್ತಿದ್ದಾರೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಇದೀಗ ವೇದಿಕೆಗೆ ಬಂದಿದ್ದು, ಸಾವಿರಾರು ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ. ಪಂಚಮಸಾಲಿ ಸಮುದಾಯದ ಹಿರಿಯ ನಾಯಕರು ಒಬ್ಬೊಬ್ಬರಾಗಿ ಬಂದು ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ.