ಬೆಂಗಳೂರು, ಜೂನ್ 10: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ ಕಂಡು ಬಂದಿರುವ ಗಂಭೀರ ತಾಂತ್ರಿಕ ಲೋಪ ಹಾಗೂ ಸಾರ್ವಜನಿಕ ಹಣದ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆಯಡಿ ನೋಂದಾಯಿತ ಫಲಾನುಭವಿಗಳ ಪೈಕಿ ಮೃತಪಟ್ಟ ಮಹಿಳೆಯರ ಬ್ಯಾಂಕ್ ಖಾತೆಗಳಿಗೂ ಕಳೆದ ಐದು ತಿಂಗಳುಗಳಿಂದ ಹಣ ಜಮೆಯಾಗಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಸಮಗ್ರವಾಗಿ ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ನಡೆಸಿದ ಪರಿಶೀಲನೆ ಮತ್ತು ತಾಂತ್ರಿಕ ಆಡಿಟ್ ವೇಳೆ ಈ ಲೋಪ ಬೆಳಕಿಗೆ ಬಂದಿದೆ. ರಾಜ್ಯದಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ. ಪಡೆಯುತ್ತಿದ್ದ ಸುಮಾರು 1.48 ಲಕ್ಷ ಮಹಿಳೆಯರು ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಕಳೆದ ಐದು ತಿಂಗಳುಗಳಿಂದ ಹಣ ವರ್ಗಾವಣೆಯಾಗುತ್ತಿತ್ತು. ಈ ಮೂಲಕ ಸುಮಾರು 128 ಕೋಟಿ ರೂ. ಸಾರ್ವಜನಿಕ ಹಣ ದುರ್ಬಳಕೆಯಾಗಿರುವುದು ಅಂಕಿ ಅಂಶಗಳ ಸಮೇತ ಪತ್ತೆಯಾಗಿದೆ. ಕೆಲವು ಪ್ರಕರಣಗಳಲ್ಲಿ ಮೃತ ಫಲಾನುಭವಿಗಳ ಸಂಬಂಧಿಕರು ಎಟಿಎಂ ಹಾಗೂ ಯುಪಿಐ ಮೂಲಕ ಹಣವನ್ನು ಪಡೆದುಕೊಂಡಿರುವುದೂ ಗಮನಕ್ಕೆ ಬಂದಿದೆ.
ಒಂದು ಖಾತೆ, ಮತ್ತೊಂದು ಮೊಬೈಲ್ ಸಂಖ್ಯೆ: ತಾಂತ್ರಿಕ ದೋಷ ಬಹಿರಂಗ
ಈ ಮಾಹಿತಿ ದೊರಕಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತನಿಖೆ ವೇಳೆ ಮತ್ತೊಂದು ಪ್ರಮುಖ ಲೋಪವೂ ಪತ್ತೆಯಾಗಿದೆ. ಬ್ಯಾಂಕ್ ಖಾತೆ ಹೊಂದಿರುವ ಫಲಾನುಭವಿಯ ವಿವರಗಳು ಒಂದು ಕಡೆ ಇದ್ದರೆ, ಅದಕ್ಕೆ ಜೋಡಣೆಯಾಗಿರುವ ನೋಂದಾಯಿತ ಮೊಬೈಲ್ ಸಂಖ್ಯೆಗಳು ಬೇರೆಯವರ ಹೆಸರಿನಲ್ಲಿರುವ ಪ್ರಕರಣಗಳು ಕಂಡು ಬಂದಿವೆ. ಇಂತಹ ತಾಂತ್ರಿಕ ಸಮಸ್ಯೆಗಳಿಂದ ನಿಜವಾದ ಅರ್ಹರಿಗೆ ಹಣ ತಲುಪದೇ ವ್ಯವಸ್ಥೆಯ ದುರ್ಬಳಕೆ ನಡೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಹೊಸ ಅರ್ಜಿಗಳಿಗೆ ಅವಕಾಶ ನೀಡುವ ಕುರಿತು ಚಿಂತನೆ
ಪ್ರಸ್ತುತ ಇರುವ ಗೊಂದಲಗಳನ್ನು ನಿವಾರಿಸಿ, ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಉದ್ದೇಶದಿಂದ ಈಗಿನ ಫಲಾನುಭವಿಗಳ ಪಟ್ಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅರ್ಹ ಮಹಿಳೆಯರಿಂದ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚೆ ನಡೆಸುತ್ತಿದೆ.
ಇನ್ನು ಮುಂದೆ ಇ-ಜನ್ಮ ಪೋರ್ಟಲ್ ಮೂಲಕ ಮರಣ ಪ್ರಮಾಣಪತ್ರಗಳನ್ನು ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆ ಮಾಡುವ ಹಾಗೂ ಫಲಾನುಭವಿಗಳು ಜೀವಂತವಾಗಿರುವುದನ್ನು ದೃಢೀಕರಿಸಲು ವಾರ್ಷಿಕ ಜೀವಿತ ಪ್ರಮಾಣ ಪತ್ರ ಅಥವಾ ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.















