ನಿಂಬೆಹುಲ್ಲಿಗೆ ನಿಂಬೆಯ ಪರಿಮಳವಿರುವುದರಿಂದ ನಿಂಬೆಹುಲ್ಲು ಎಂಬ ಹೆಸರು ಬಂದಿದೆ ಕೇರಳ ರಾಜ್ಯದಲ್ಲಿ ಹೇರಳವಾಗಿ ಬೆಳೆಯುವ ಈ ಹುಲ್ಲನ್ನು ಚೊಮಲ ಪುಲ್ಲು ಎಂಬ ಹೆಸರಿನಿಂದ ಕರೆಯುತ್ತಾರೆ. ಇದರಿಂದ ದೊರೆಯುವ ಎಣ್ಣೆ ‘ಈಸ್ಟ್ ಇಂಡಿಯನ್ ಲೆಮನ್ ಗ್ರಾಸ್ ತೈಲ’, ಮಲಬಾರ್ ಅಥವಾ ಕೊಚಿನ್ ಲೆಮನ್ ಗ್ರಾಸ್ ತೈಲ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಭಾರತದಲ್ಲಿ ಅಧಿಕವಾಗಿ ರಫ್ತಾಗುತ್ತಿರುವ ಸುಗಂಧ ತೈಲಗಳಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ ಈ ಎಣ್ಣೆಯನ್ನು ಸುಗಂಧ ದ್ರವ್ಯಗಳು, ಸಾಬೂನು ಮತ್ತು ಕಾಂತಿವರ್ಧಕ ಗಳು ಮತ್ತು ಸೋಂಕು ನಿವಾರಕ ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.
ಮಣ್ಣು
ಎಲ್ಲಾ ವಿಧವಾದ ಮಣ್ಣಿನಲ್ಲೂ ಈ ಬೆಳೆ ಬೆಳೆಯುತ್ತದೆಯಾದರೂ ಕೆಂಪುಗೋಡು ಮಣ್ಣಿನಿಂದ ಜಂಬಿಟ್ಟಿಗೆಯಂತಹ ಮರಳು ಮಿಶ್ರಿತ ಗೋಡು ಮತ್ತು ಕೆಂಪು ಮಣ್ಣುಗಳಲ್ಲಿ ಗೊಬ್ಬರದ ಅವಶ್ಯಕತೆ ಇದೆ. ಕಲ್ಲು ಮಣ್ಣು ಮತ್ತು ನೀರು ಬಸಿಯದೆ ಇರುವಂತಹ ಮಣ್ಣು ಸೂಕ್ತವಲ್ಲ.
ಹವಾಗುಣ
ಬೆಚ್ಚಗಿನ ಆದ್ರ್ರ ವಾತಾವರಣದಲ್ಲಿ ಹೆಚ್ಚು ಬಿಸಿಲು ಮತ್ತು ವರ್ಷವಿಡೀ ಹಂಚಿಕೆಯಾಗಿರು ವಂತಹ 200-250 ಸೆಂ.ಮೀ. ಮಳೆಯ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯಬಲ್ಲದು. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯದೊಂದಿಗೆ ಬೆಳೆಯಬಹುದು.
ತಳಿಗಳು
ಒಡಿ- 10, ಒಡಿ- 408, ಬಿಪಿಲ್ -38,ಆರ್ ಆರ್ ಐ- 39 ಮತ್ತು ಸಿಮ ಎಪಿ – 48 ಕಾವೇರಿ ಮತ್ತು ಕೃಷ್ಣ
ಬೇಸಾಯ ಕ್ರಮಗಳು
ಈ ಹುಲ್ಲನ್ನು ಬೀಜ ಬಿತ್ತಿ ವೃದ್ಧಿಪಡಿಸುತ್ತಾರೆ. ಕೆಲವು ವೇಳೆ ಒಟ್ಟು ಪಾತಿಗಳಲ್ಲಿ ಹುಲ್ಲಿನ ಬೇರುಗಳಿರುವ ತುಂಡುಗಳಿಂದ ಸಸಿಗಳನ್ನು ಬೆಳೆಸಿ ನಾಟಿ ಮಾಡುವುದೂ ಉಂಟು. ಒಳ್ಳೆಯ ಗುಣಮಟ್ಟದ ಎಣ್ಣೆ ಹಾಗೂ ಇಳುವರಿಗೆ ಬೇರಿರುವ ತುಂಡುಗಳು ಅವಶ್ಯ ಮೇ ತಿಂಗಳ ಕಡೆಯ ವಾರದಲ್ಲಿ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ನಾಟಿ ಮಾಡಬಹುದು ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ನೀರಾವರಿ ಸೌಲಭ್ಯವಿರುವೆಡೆ ವರ್ಷದ ಯಾವುದೇ ಕಾಲದಲ್ಲಾದರೂ ‘ನಾಟಿ ಮಾಡಬಹುದು. ನಾಟಿಗೆ ಮುನ್ನ1 ಚ. ಮೀಟರ್ ನೆಲವನ್ನು ಹದ ಮಾಡಿಕೊಂಡು 5 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಹಾಕಿ 60 ಸೆಂ.ಮೀನಿ. ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಬೇಕು.
ನೀರಾವರಿ
ನಾಟಿಯಾದ ನಂತರ ಮಳೆ ಇಲ್ಲದಿದ್ದಲ್ಲಿ ದಿನಬಿಟ್ಟು ದಿನ ಒಂದು ತಿಂಗಳಾದರೂ ನೀರು ಹಾಯಿಸಬೇಕು.
ಕಳೆ ಹತೋಟಿ
ಹುಲ್ಲು ಬೇರು ಬಿಡುವವರೆಗೆ ಭೂಮಿಯನ್ನು ಕಳೆರಹಿತವಾಗಿಡಬೇಕು. 4 ತಿಂಗಳ ನಂತರ ಮಧ್ಯಂತರ ಬೇಸಾಯ ಮಾಡಿ, ಪ್ರತಿ ಕೊಯ್ಲಿನ ನಂತರ ಅಗತೆ ಮಾಡುವುದರಿಂದ ಬೇರು ನೆಲದಿಂದ ಮೇಲೇಳುವುದನ್ನು ತಪ್ಪಿಸಬಹುದು.
ಸಸ್ಯ ಸಂರಕ್ಷಣೆ
ಇದಕ್ಕೆ ಯಾವುದೇ ತರಹದ ಹಾನಿಕಾರಕ ಕೀಟ ಅಥವಾ ರೋಗ ಬಾಧೆ ಕಂಡುಬಂದಿಲ್ಲ.
ಕೊಯ್ದು ಮತ್ತು ಇಳುವರಿ
ಈ ಹುಲ್ಲು ಬಹುವಾರ್ಷಿಕ ಬೆಳೆಯಾದ್ದರಿಂದ ನಾಟಿ ಮಾಡಿದ 5 ವರ್ಷಗಳವರೆಗೆ ಒಳ್ಳೆಯ ಇಳುವರಿ ಕೊಡುತ್ತದೆ. ನೆಲಮಟ್ಟದಿಂದ 10 ಸೆಂ.ಮೀ. ಎತ್ತರದಲ್ಲಿ ಹುಲ್ಲನ್ನು ಕತ್ತರಿಸಬೇಕು. ಮೊದಲ ವರ್ಷದಲ್ಲಿ 3 ಕೊಯ್ದು ಮತ್ತು ಮುಂದಿನ ವರ್ಷಗಳಲ್ಲಿ 5-6 ಕೊಯ್ದುಗಳನ್ನು ಮಾಡಬಹುದು ನಾಟಿ ಮಾಡಿದ 90 ದಿನಗಳಲ್ಲಿ ಎರಡನೆಯ ಕೊಯ್ದು ಮಾಡಬಹುದು.
ಕೊಯ್ದಾದ ನಂತರ ಎಲೆಗಳನ್ನು ನೆರಳಿನಲ್ಲಿಟ್ಟರೆ ಎಣ್ಣೆಯ ಗುಣಮಟ್ಟ ಅಥವಾ ಇಳುವರಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಅನಂತರ ಹುಲ್ಲನ್ನು ಭಟ್ಟ ಇಳಿಸಲು ರಿ ಸಣ್ಣ ಚೂರುಗಳಾಗಿ ಕತ್ತರಿಸಬೇಕು. ಪ್ರತಿ ಕೊಯ್ಲಿಗೆ 1 ಚ. ಅಡಿ ಪ್ರದೇಶದಿಂದ 40-50 ಮಿ.ಲೀ. ನಷ್ಟು ಎಣ್ಣೆಯನ್ನು ಪಡೆಯಬಹುದು.
ಉಪಯುಕ್ತ ಭಾಗಗಳು
ಹುಲ್ಲು ಮತ್ತು ಹುಲ್ಲಿನಿಂದ ತಯಾರಿಸಿದ ಎಣ್ಣೆ
ರಾಸಾಯನಿಕ ಘಟಕ
ನಿಂಬೆಹುಲ್ಲಿನಲ್ಲಿ ಸಿಟ್ರಾಲ್ ಎಂಬ ರಾಸಾಯನಿಕ ಅಂಶವಿರುತ್ತದೆ.
ಔಷಧೀಯ ಗುಣಗಳು
ಜೀರ್ಣಶಕ್ತಿ ಹೆಚ್ಚಿಸಲು: ಚಹಾ ತಯಾರಿಸುವಾಗ ನಿಂಬೆಹುಲ್ಲನ್ನು ಹಾಕಿ ಕುದಿಸಿ ತಯಾರಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದರೊಂದಿಗೆ ನೆಗಡಿ, ಕೆಮ್ಮುಗಳಿಗೂ ಉತ್ತಮ ಔಷಧಿಯಾಗಿರುತ್ತದೆ. ಅಲ್ಲದೇ ಚಹಾಕ್ಕೂ ಒಳ್ಳೆಯ ಪರಿಮಳ ಬರುತ್ತದೆ.
3 ಮಕ್ಕಳಲ್ಲಿ ಅಜೀರ್ಣದಿಂದ ಉಂಟಾದ ಹೊಟ್ಟೆನೋವು : ಇದ್ದಲ್ಲಿ
ನಿಂಬೆಹುಲ್ಲು ಹಾಕಿ ಕುದಸಿದ ನೀರಿಗೆ ಹಾಲು, ಸಕ್ಕರೆ ಬೆರೆಸಿ ಕುಡಿಸಬೇಕು.
ಪ್ರಮಾಣ 1 ರಿಂದ 3 ವರ್ಷದ ಮಕ್ಕಳಿಗೆ-1 ಚಮಚ ದಿನಕ್ಕೆ ಮೂರು ಬಾರಿ.
3ರಿಂದ 6 ವರ್ಷದ ಮಕ್ಕಳಿಗೆ-2ರಿಂದ 3 ಚಮಚೆ ಮೂರು ಬಾರಿ
★ ಮಕ್ಕಳಲ್ಲಿ ಜ್ವರ ಇರುವಾಗ ನಿಂಬೆಹುಲ್ಲು ಹಾಕಿ ತಯಾರಿಸಿದ ಕಷಾಯಕ್ಕೆ 1/4 ಚಮಚೆ ಶುಂಠಿರಸ ಮತ್ತು ಬೆಲ್ಲ ಅಥವಾ ಸಕ್ಕರೆ ಬೆರೆಸಿ ಕುಡಿಸಬೇಕು
ಪ್ರಮಾಣ 1ರಿಂದ ವರ್ಷದ ಮಕ್ಕಳಿಗೆ-1 ಚಮಚೆ
3ರಿಂದ 6 ವರ್ಷದ ಮಕ್ಕಳಿಗೆ 2 ಇಂದ 3 ಚಮಚೆ ,
★ಮುಟ್ಟಿನ ಹೊಟ್ಟೆನೋವಿನಿಂದ ಬಳಲುವ ಸ್ತ್ರೀಯರು ನಿಂಬೆಹುಲ್ಲಿನ ಕಷಾಯ ತಯಾರಿಸಿ 4ರಿಂದ 6 ಚಮಚ ಕಷಾಯಕ್ಕೆ ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಮುಟ್ಟಿನ ಸಮಯದಲ್ಲಿ ಮೂರುದಿನ ದಿನಕ್ಕೆರಡು ಬಾರಿ ಕುಡಿಯಬೇಕು.
★ಹೊಟ್ಟೆಯುಬ್ಬರ, ಹೊಟ್ಟೆನೋವು, ಎದೆಯುರಿ ಇರುವಾಗ ನಿಂಬೆಹುಲ್ಲಿನ ಕಷಾಯ ತಯಾರಿಸಿ ಅದಕ್ಕೆ ಪುದೀನ ರಸ (ಒಂದು ಚಮಚೆ), ಚಿಟಿಕೆ ಕಾಳುಮೆಣಸಿನ ಪುಡಿ, ಚಿಟಕೆ ಒಣಶುಂಠಿ ಪುಡಿ ಮತ್ತು ಸಕ್ಕರೆ ಬೆರೆಸಿ ಕುಡಿಯಬೇಕು. ಇದನ್ನು ಎರಡು ಮೂರು ಗಂಟೆಗಳಿಗೊಮ್ಮೆ ಕುಡಿಯಬೇಕು.
★ ಹೊಟ್ಟೆನೋವು ಮತ್ತು ವಾಂತಿಯಾಗುತ್ತಿದ್ದಲ್ಲಿ ನಿಂಬೆಹುಲ್ಲಿನಿಂದ ತಯಾರಿಸಿದ ತೈಲವನ್ನು ಅರ್ಧಲೋಟ ನೀರಿಗೆ ಮೂರರಿಂದ ಆರು ಹನಿ ತೈಲ ಹಾಕಿ ಅದಕ್ಕೆ ಸಕ್ಕರೆ ಬೆರೆಸಿ
★ ಸಂಧಿವಾತ/ಸೊಂಟನೋವು ಮುಂತಾದ ಯಾವುದೇ ನೋವಿದ್ದಲ್ಲಿ ನಿಂಬೆಹುಲ್ಲಿನ ತೈಲವನ್ನು ಕೊಬ್ಬರಿಎಣ್ಣೆಯಲ್ಲಿ ಬೆರೆಸಿ ನೋವಿರುವ ಭಾಗದಲ್ಲಿ ಮಸಾಜ್ ಮಾಡಿಕೊಳ್ಳಬೇಕು.
★ ಕಾಂತಿವರ್ಧಕ : ವಾರಕ್ಕೊಮ್ಮೆ ಇಲ್ಲವೇ ಹದಿನೈದು ದಿನಗಳಿಗೊಮ್ಮೆ ನಿಂಬೆಹುಲ್ಲಿನ ತೈಲವನ್ನು ಮುಖಕ್ಕೆ ಹಚ್ಚಿಕೊಂಡು ಮೃದುವಾಗಿ ಬೆರಳುಗಳಿಂದ ಮಸಾಜ್ ಮಾಡಿಕೊಂಡು ಬಿಸಿನೀರಿಗೆ ಒಂದೆರಡು ಹನಿ ನೀಲಗಿರಿ ತೈಲ ಹಾಕಿ ಹಬೆ ತೆಗೆದುಕೊಳ್ಳಬೇಕು. ಇದರಿಂದ ಮುಖದಲ್ಲಿನ ಕೊಳೆ ಹೋಗಿ ಸ್ವಚ್ಛವಾಗುವುದಲ್ಲದೇ ಕಾಂತಿ ಹೆಚ್ಚುತ್ತದೆ.
★ಸ್ನಾನ : ಚಳಿಗಾಲದಲ್ಲಿ ಬಿಸಿನೀರಿಗೆ ಹತ್ತು ಹನಿ ನಿಂಬೆಹುಲ್ಲಿನ ತೈಲವನ್ನು ಹಾಕಿ ಸ್ನಾನ ಮಾಡುವುದರಿಂದ ಚರ್ಮ ಒಡೆಯುವುದಿಲ್ಲ ಮತ್ತು ಮೈ ಘಮಘಮಿಸುತ್ತದೆ.
★ ನಿದ್ರಾಹೀನತೆ : ನಿದ್ರೆ ಬಾರದಿದ್ದವರು ರಾತ್ರಿ ಹೊತ್ತು ತಲೆದಿಂಬಿಗೆ ನಿಂಬೆಹುಲ್ಲಿನ ಸುಗಂಧತೈಲವನ್ನು ಐದಾರು ಹನಿಗಳಷ್ಟು ಸಿಂಪಡಿಸಿಕೊಂಡಲ್ಲಿ ಅದರ ಪರಿಮಳಕ್ಕೆ ಮನಸ್ಸು ಪ್ರಫುಲ್ಲವಾಗಿ ನಿದ್ರೆ ತಾನಾಗಿಯೇ ಬರುತ್ತದೆ.
– ★ ನೆಗಡಿ : ನೆಗಡಿಯಿರುವಾಗ ಕರವಸ್ತ್ರಕ್ಕೆ ಮೂಾಲ್ಕು ಹನಿ ನಿಂಬೆಹುಲ್ಲಿನ ತೈಲವನ್ನು ಸಿಂಪಡಿಸಿ ಆಗಾಗ ಮೂಸಿ ನೋಡುತ್ತಿದ್ದಲ್ಲಿ ಆರಾಮ ಎನಿಸುತ್ತದೆ.
*ನಿಂಬೆಹುಲ್ಲಿನ ತೈಲ ತಯಾರಿಕೆ :
ಎಳ್ಳೆಣ್ಣೆ ಇಲ್ಲವೇ ಕೊಬ್ಬರಿ ಎಣ್ಣೆ – ಒಂದು ಭಾಗ
ನಿಂಬೆ ಹುಲ್ಲಿನ ಕಷಾಯ – ಒಂದು ಭಾಗ
ನಿಂಬೆಹುಲ್ಲನ್ನು ತೊಳೆದು ಸ್ವಚ್ಛಗೊಳಿಸಿ ಸಣ್ಣಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಬೇಕು. ಈ ಕಷಾಯವನ್ನು ಕೊಬ್ಬರಿ ಎಣ್ಣೆ ಇಲ್ಲವೇ ಎಳ್ಳೆಣ್ಣೆಗೆ ಬೆರಸಿ ಸಣ್ಣಗಿನ ಉರಿಯ ಮೇಲೆ ಕಾಯಿಸಬೇಕು. ಎಣ್ಣೆಯಲ್ಲಿನ ನೀರಿನಂಶ ಹೋಗುವವರೆಗೂ ಕಾಯಿಸಬೇಕು. ಒಂದು ಸೌಟಿನಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟಾಗ ಅದರಲ್ಲಿ ಚಟ್ ಚಟ್ ಶಬ್ದ ಬಾರದಿದ್ದಲ್ಲಿ ಎಣ್ಣೆ ತಯಾರಾಗಿದೆ ಎಂದರ್ಥ ಎಣ್ಣೆ ತಯಾರಾದ ಮೇಲೆ ಇಳಿಸಿ ಆರಿಸಿ, ಶೋಧಿಸಿ ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಬೇಕು. ಈ ಎಣ್ಣೆಯನ್ನು ಮಲಗುವ ಮುಂಚೆ ಚಳಿಗಾಲದಲ್ಲಿ ಕೈ, ಕಾಲು, ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮ ಒಡೆಯುವುದಿಲ್ಲ ಈ ತೈಲವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು, ಕಣ್ಣುರಿ ಕಡಿಮೆಯಾಗುತ್ತದೆ. ನಿದ್ರೆ ಚೆನ್ನಾಗಿ ಬರುತ್ತದೆ.
ಅಡುಗೆ
ನಿಂಬೆಹುಲ್ಲಿನ ಟೀ : ಟೀ ತಯಾರಿಸುವಾಗ ಅದಕ್ಕೆ ನಿಂಬೆಹುಲ್ಲನ್ನು ಬೆರೆಸಿ ಕುದಿಸಿದಲ್ಲಿ ಉತ್ತಮ ಪರಿಮಳ ಬರುವುದಲ್ಲದೇ ರುಚಿಕರವೂ ಆಗಿರುತ್ತದೆ. ಅಲ್ಲದೇ ಈ ಟೀ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೇ ನೆಗಡಿ, ಕೆಮ್ಮು, ಗಂಟಲು ನೋವಿದ್ದಲ್ಲಿ ಔಷಧಿ ಯಾಗಿಯೂ ಕೆಲಸ ಮಾಡುತ್ತದೆ.
ತಂಬುಳಿ : ನಿಂಬೆಹುಲ್ಲನ್ನು ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಹುರಿದುಕೊಂಡು ತೆಂಗಿನ ತುರಿಯೊಂದಿಗೆ ರುಬ್ಬಿ ನಂತರ ಮೊಸರು ಇಲ್ಲವೇ ಮಜ್ಜಿಗೆಯಲ್ಲಿ ಬೆರೆಸಿ ಒಗ್ಗರಣೆ ಕೊಟ್ಟು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ರುಚಿಕರವಾಗಿರುತ್ತದೆ.
ಇತರ ಭಾಷೆಗಳಲ್ಲಿ
ಸಂಸ್ಕೃತ —ಭ್ರಸ್ನಣ, ತಕ್ರತೃಣಿ
ಹಿಂದಿ —ಗಂಧತ್ರಣ
ತಮಿಳು —ಕರ್ಪೂರ ಪುಲ್, ವಾಸನಾಪುಲ್ಲ
ಮಳೆಯಾಳಂ —ಚಾಯಪುಲ್
ತೆಲುಗು —ನಿಮ್ಮಗಡ್ಡಿ
ಇಂಗ್ಲಿಷ್ —ಟ್ರೊ ಲೆಮನ್ ಗ್