ಮನೆ ಸ್ಥಳೀಯ ಎಸ್.ಎಂ. ಕೃಷ್ಣ ಅವರಿಗೆ ಸೋನಿಯಾ ಗಾಂಧಿ, ಐಟಿ–ಬಿಟಿ, ಇನ್ಫೊಸಿಸ್‌ ಸಂತಾಪ ಸೂಚಿಸಲಿಲ್ಲವೇಕೆ ?: ಎ.ಎಚ್. ವಿಶ್ವನಾಥ್...

ಎಸ್.ಎಂ. ಕೃಷ್ಣ ಅವರಿಗೆ ಸೋನಿಯಾ ಗಾಂಧಿ, ಐಟಿ–ಬಿಟಿ, ಇನ್ಫೊಸಿಸ್‌ ಸಂತಾಪ ಸೂಚಿಸಲಿಲ್ಲವೇಕೆ ?: ಎ.ಎಚ್. ವಿಶ್ವನಾಥ್ ಪ್ರಶ್ನೆ

0

ಮೈಸೂರು: ಸಾಂಸ್ಕೃತಿಕ ನಾಯಕ ಹಾಗೂ ಮುತ್ಸದ್ದಿಯೂ ಆಗಿ ರಾಜ್ಯದಲ್ಲಿ ಕಾಂಗ್ರೆಸ್‌ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸಂತಾಪ ಸೂಚಿಸಲಿಲ್ಲವೇಕೆ? ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಕೇಳಿದರು.

Join Our Whatsapp Group

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವರು ನಮ್ಮ ಪಕ್ಷದವರಲ್ಲ, ಸತ್ತಾಗಲೂ ದ್ವೇಷ ಮಾಡಬೇಕು ಎಂಬ ಮನಸ್ಥಿತಿಯನ್ನು ರಾಜಕಾರಣಿಗಳು ಬಿಡಬೇಕು. ರಾಜಕಾರಣವನ್ನು ಸಾವಿನಲ್ಲೂ ಪ್ರದರ್ಶಿಸುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ನಾಯಕತ್ವದ ರಾಜ್ಯ ಸರ್ಕಾರ ಕೃಷ್ಣ ಅವರಿಗೆ ಗೌರವಯುತವಾದ ವಿದಾಯ ಹೇಳುವಲ್ಲಿ ಮಾದರಿಯಾಗಿ ನಡೆದುಕೊಂಡಿದೆ. ಇದಕ್ಕಾಗಿ ಮುಖ್ಯಮಂತ್ರಿ, ಡಿಸಿಎಂ ಡಿ.ಕೆ. ಶಿವಕುಮಾರ್, ಇಡೀ ಮಂತ್ರಿ‌ ಮಂಡಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ‘ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಲ್ಲಿಸಿದರು. ಆದರೆ, ಸೋನಿಯಾ ಗಾಂಧಿ ಸಂತಾಪ ವ್ಯಕ್ತಪಡಿಸಿಲ್ಲ. ರಾಜಕಾರಣದಲ್ಲಿ ಇಂಥಾದ್ದು ನಡೆಯಬಾರದು. ಏಕೆ ಅವರು ಕಾಂಗ್ರೆಸ್‌ಗೆ ದುಡಿಯಲಿಲ್ಲವೇ ಎಂದು ಪ್ರಶ್ನಿಸಿದರು.

ಐಟಿ–ಬಿಟಿ, ಇನ್ಫೊಸಿಸ್‌ ಸಂತಾಪ ಸೂಚಿಸಿಲ್ಲ

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ಗೆ ದುಡಿದವರು. ಆಪತ್ಕಾಲದಲ್ಲಿ ಕೈಹಿಡಿದವರು. ಮಾದರಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್‌ಗೆ ಗೌರವ ತಂದುಕೊಟ್ಟವರು. ಅಭಿವೃದ್ಧಿ ರಾಜಕಾರಣ ಮಾಡಿದರೇ ಹೊರತು ದ್ವೇಷದ ರಾಜಕಾರಣ ಮಾಡಲಿಲ್ಲ. ಯಾವುದೇ ವ್ಯಕ್ತಿ ಕಾಲವಾದಾಗ ಮನುಷ್ಯತ್ವ ತೋರಬೇಕು. ದೇವರಾಜ ಅರಸು ಸತ್ತಾಗ ಕೂಡ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಲಿಲ್ಲ. ಅವರ ಕೊಡುಗೆ ನೆನೆಯಬೇಕಿತ್ತು. ಆರ್ಥಿಕತೆಗೆ ಒತ್ತು ನೀಡಿದ ಪಿ.ವಿ. ನರಸಿಂಹರಾವ್ ಅವರಿಗೂ ಸಂತಾಪ ಹೇಳಲಿಲ್ಲ. ವಿ.ಪಿ. ಸಿಂಗ್, ಚಂದ್ರಶೇಖರ್ ಸತ್ತಾಗಲೂ ಆ ಕೆಲಸ ಮಾಡಲಿಲ್ಲ ಎಂದು ದೂರಿದರು.

ಯಾರಾದರೂ ಸತ್ತಾಗ ಆತನ ವ್ಯಕ್ತಿತ್ವ, ಕೆಲಸ ಹಾಗೂ ಕೊಡುಗೆ ಮುಖ್ಯ ಆಗಬೇಕೇ ಹೊರತು ದ್ವೇಷವಲ್ಲ. ಐಟಿ–ಬಿಟಿಯವರು, ಇನ್ಫೊಸಿಸ್ ಮೊದಲಾದ ಕಂಪನಿಗಳು ಸಂತಾಪ ಸೂಚಿಸಬೇಕಿತ್ತಲ್ಲವೇ? ಇವರೆಲ್ಲರೂ ಯಾರಿಂದ ಬೆಳೆದರು? ನಾವೆಲ್ಲರೂ ಮನುಷ್ಯತ್ವ ಕಳೆದುಕೊಂಡು ಬಿಟ್ಟಿದ್ದೇವೆಯೇ? ಎಂದು ಕೇಳಿದರು.

ಆದರೆ, ರಾಜ್ಯ ಸರ್ಕಾರದ ದೊಡ್ಡ ನಡವಳಿಕೆ ನೋಡಿ ಸಂತೋಷವಾಯಿತು. ದೊಡ್ಡ ನಾಯಕನಿಗೆ ವಿದಾಯ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಇದಕ್ಕಾಗಿ ಆಭಾರಿಯಾಗಿದ್ದೇನೆ ಎಂದರು.

ಮೈಸೂರಿನ ವರ್ತುಲ ರಸ್ತೆ ನಿರ್ಮಿಸಿದ ಕೃಷ್ಣ ಅವರ ಹೆಸರನ್ನು ಶಾಶ್ವತವಾಗಿ ಉಳಿಸಲು, ಪ್ರವೇಶ ದ್ವಾರದಲ್ಲಿ  ದೊಡ್ಡದಾದ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು.