“ಕಣ್ಣಾ ಮುಚ್ಚೆ ಕಾಡೇ ಗೂಡೇ’ ಹಾಡಿನ ಸಾಲು ಈಗ ಚಿತ್ರದ ಹೆಸರಾಗಿ ಮೂಡಿಬಂದಿದೆ. ಡಾರ್ಲಿಂಗ್ ಪ್ರೊಡಕ್ಷನ್ಸ್ ಅಡಿಯಲ್ಲಿ ಅನಿತಾ ವೀರೇಶ್ ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ನಟರಾಜ್ ಕೃಷ್ಣೇಗೌಡ ನಿರ್ದೇಶನ ಮಾಡಿದ್ದಾರೆ.
ಸಿನಿಮಾದ ಕಥೆ ಒಂದು ಕೊಲೆಯ ಸುತ್ತ ನಡೆಯುತ್ತದೆ. ಅದನ್ನು ಕಂಡು ಹಿಡಿಯಲು ಖಾಸಗಿ, ಸರ್ಕಾರಿ ಪಡೆ ಮುಂದೆ ಬರುತ್ತದೆ. ಇದರ ಮಧ್ಯೆ ಹುಡುಗಿಯೊಬ್ಬಳು ಸಮಸ್ಯೆಯಲ್ಲಿ ಸಿಲುಕುತ್ತಾಳೆ. ಅಂತಿಮವಾಗಿ ಅಪರಾಧಿ ಸಿಗುತ್ತಾನಾ? ಆಕೆಯು ಕಷ್ಟದಿಂದ ಹೊರ ಬರುತ್ತಾಳಾ? ಎಂಬುದನ್ನು ಸಸ್ಪೆನ್ಸ್ ಥ್ರಿಲ್ಲರ್‌ನೊಂದಿಗೆ ತೋರಿಸಲಾಗುತ್ತಿದೆ.
ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿವೃತ್ತ ವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ಅಥರ್ವ ಪ್ರಕಾಶ್ ನಾಯಕನಾಗಿ ಎರಡನೇ ಅವಕಾಶ. ತುಳು ಚಿತ್ರದಲ್ಲಿ ನಟಿಸಿದ್ದ ಪ್ರಾರ್ಥನಾ ನಾಯಕಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಖಳನಟನಾಗಿ ವೀರೇಶ್ ಕುಮಾರ್ ನಟಿಸಿದ್ದಾರೆ.
ಪುನೀತ್ ಆರ್ಯ-ವೀರೇಶ್ ಕುಮಾರ್ ಸಾಹಿತ್ಯದ ಹಾಡುಗಳಿಗೆ ಸಂತೋಷ್-ವಿಜಿತ್ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ದೀಪಕ್ ಛಾಯಾಗ್ರಹಣ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಮಂಗಳೂರು ಸುಂದರ ತಾಣಗಳಲ್ಲಿ ನಡೆಸಲಾಗಿದೆ.
ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ.