ಮನೆ ಮನರಂಜನೆ ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ಟೀಸರ್ ಬಿಡುಗಡೆ

ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ಟೀಸರ್ ಬಿಡುಗಡೆ

0

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ನವೀನ್ ಶಂಕರ್. ಅವರು ಭಿನ್ನ ಸಿನಿಮಾಗಳನ್ನು, ಕತೆಗಳನ್ನು ಆಯ್ದುಕೊಂಡು ಪರಿಪೂರ್ಣ ನಟನಾಗಿ ಬೆಳೆಯುವ ಹಾದಿಯಲ್ಲಿದ್ದಾರೆ. ‘ಗುಲ್ಟು’, ‘ಧರಣಿ ಮಂಡಲ ಮಧ್ಯದೊಳಗೆ’ ಆ ಬಳಿಕ ‘ಹೊಯ್ಸಳ’ ಸಿನಿಮಾದಲ್ಲಿ ವಿಲನ್ ಹೀಗೆ ಭಿನ್ನ ರೀತಿಯ ಸಿನಿಮಾ ಹಾಗೂ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಲೇ ಬಂದಿರುವ ನವೀನ್ ಶಂಕರ್ ಇದೀಗ ‘ನೋಡಿದವರು ಏನಂತಾರೆ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Join Our Whatsapp Group

ನವೀನ್ ಈ ವರೆಗೆ ಮಾಡಿರುವ ಸಿನಿಮಾಗಳಿಗಿಂತಲೂ ಭಿನ್ನವಾಗಿ ಇರಲಿದೆ ಈ ಸಿನಿಮಾ.

‘ನೋಡಿದವರು ಏನಂತಾರೆ’ ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ. ಪ್ರೀತಿ, ನಗು, ಅಳು, ಭಾವನಾತ್ಮಕ ಅಂಶಗಳ ಮಿಶ್ರಣವೇ ಟೀಸರ್​ನಲ್ಲಿದೆ. ‘ನೋಡಿದವರು ಏನಂತಾರೆ’ ಸಿನಿಮಾವನ್ನು ಕುಲದೀಪ್ ಕಾರಿಯಪ್ಪ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಅಪೂರ್ವ ಭಾರದ್ವಾಜ್ ನಾಯಕಿಯಾಗಿ ನಟಿಸಿದ್ದಾರೆ. ‘ಹೊಯ್ಸಳ’, ‘ಕ್ಷೇತ್ರಪತಿ’ ಮತ್ತು ‘ಸಲಾರ್’ ಸಿನಿಮಾಗಳಲ್ಲಿ ರಗಡ್ ಪಾತ್ರಗಳ ಮೂಲಕ ಎಲ್ಲರ ಗಮನಸೆಳೆದಿದ್ದ ನವೀನ್ ಶಂಕರ್, ಈ ಚಿತ್ರದಲ್ಲಿ ಕೊಂಚ ವಿಭಿನ್ನವಾಗಿ ಕಾಣಿಸಲಿದ್ದಾರೆ.

ಮಯೂರೆಶ್ ಅಧಿಕಾರಿ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ, ಮನು ಶೆಡಗಾರ್ ಸಿನಿಮಾದ ಎಡಿಟ್ ಮಾಡಿದ್ದಾರೆ. ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

ಖ್ಯಾತ ಲೇಖಕ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದು ಹಾಡಿಗೆ ಲೈಲಾ ಸಾಹಿತ್ಯ ಬರೆದಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಅವರುಗಳು ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಜನವರಿ 31, 2025 ರಂದು ‘ನೋಡಿದವರು ಏನಂತಾರೆ’ ಸಿನಿಮಾ ಬಿಡುಗಡೆ ಆಗುತ್ತಿದೆ. ಪ್ರೇಕ್ಷಕರಿಗೆ ಈ ಸಿನಿಮಾ ಯಾವ ರೀತಿಯ ಅನುಭವ ನೀಡಲಿದೆ ನೋಡಬೇಕಿದೆ.