ಹೈಟೆಕ್ ವೇಶ್ಯಾವಾಟಿಕೆ ಗೃಹ ನಡೆಸುತ್ತಿದ್ದ ಅನಿಲ್ ಕುಮಾರ್ ವಿ ಅಲಿಯಾಸ್ ಅನಿಲ್ ರೆಡ್ಡಿನನ್ನು ಗೂಂಡಾ ಕಾಯಿದೆಯಡಿ ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ದಳದಿಂದ ಬಂಧಿಸಲಾಗಿದೆ.
ಬೆಂಗಳೂರು ನಗರ ಕೇಂದ್ರ ಅಪರಾಧ ದಳ (ಸಿಸಿಬಿ) ಅಧಿಕಾರಿಗಳು, ಬೆಂಗಳೂರು ನಗರ ಮತ್ತು ಆಂಧ್ರಪದೇಶ ರಾಜ್ಯಗಳಲ್ಲಿ ಸ್ಪಾಗಳ ಸೋಗಿನಲ್ಲಿ ವಿದೇಶ ಹಾಗೂ ಹೊರ ರಾಜ್ಯದ ಮಹಿಳೆಯರನ್ನು ಹೆಚ್ಚಿನ ಸಂಬಳದ ಆಮಿಷಗಳನ್ನು ಒಡ್ಡಿ ಮಾನವ ಕಳ್ಳ ಸಾಗಾಣಿಕೆ ಮುಖಾಂತರ ಕರೆಸಿಕೊಂಡು, ಅಕ್ರಮ ಬಂಧನದಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯಾದ ಅನಿಲ್ ಕುಮಾರ್ ಅಲಿಯಾಸ್ ಅನಿಲ್ ರೆಡ್ಡಿ ಅಲಿಯಾಸ್ ಅನಿಲ್’ನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಪ್ರಸ್ತಾವನೆ ಸಲ್ಲಿಸಿದ್ದರು.
ಈತನ ವಿರುದ್ಧ ಆಂಧ್ರಪದೇಶ ಮತ್ತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈವರೆಗೆ ಮಾನವ ಕಳ್ಳ ಸಾಗಾಟ, ಅತ್ಯಾಚಾರ ಸೇರಿದಂತೆ 4 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ. ಈತನು ವೃತ್ತಿಪರ ವೇಶ್ಯಾಗೃಹಗಳನ್ನು ನಡೆಸುವುದನ್ನು ಮುಂದುವರಿಸಿದ್ದನು.
ಮಹದೇವಪುರ ಪೊಲೀಸ್ ಠಾಣೆ ಹಾಗೂ ಸಿಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಗಣಿಸಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಡಿ.20ರಂದು ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಳ್ಳಾರಿ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದರು. ಬಂಧನ ಆದೇಶವನ್ನು ಜಾರಿಗೊಳಿಸಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಬಂಧಿತ ವ್ಯಕ್ತಿಯನ್ನು ಡಿ. 21ರಂದು ಬಳ್ಳಾರಿ ಕಾರಾಗೃಹಕ್ಕೆ ಒಪ್ಪಿಸಿರುತ್ತಾರೆ.
ನಿವೃತ್ತರ ಸ್ವರ್ಗ ಸಾಂಸ್ಕೃತಿಕ ನಾಡು ಎಂದು ಪ್ರಸಿದ್ಧವಾಗಿರುವ ಮೈಸೂರಿನಲ್ಲಿ ಹುಚ್ಚು ಅಣಬೆಯಂತೆ ಪ್ರತಿದಿನ ಶುರುವಾಗುತ್ತಿರುವ ಹೊಸ ವೇಶ್ಯಾವಾಟಿಕೆಯ ಮಸಾಜ್ ಸೆಂಟರ್, ವೇಶ್ಯಾವಾಟಿಕೆಯ ಬ್ಯೂಟಿ ಪಾರ್ಲರ್ ಹಾಗೂ ಸ್ಪಾಗಳ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವವರನ್ನು ಗೂಂಡಾ ಕಾಯಿದೆಯಡಿ ಬಂಧಿಸಿ ಬಳ್ಳಾರಿ ಕಾರಾಗೃಹದಲ್ಲಿ ಶಿಕ್ಷಿಸ ಬೇಕು ಎಂಬುದು ಮೈಸೂರು ಜನತೆಯ ಬೇಡಿಕೆಯಾಗಿದೆ.














