ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿರುವ ಘಟನೆ ರಾಜ್ಯವ್ಯಾಪಿ ಆಘಾತವನ್ನುಂಟುಮಾಡಿದೆ. ಕೇವಲ ಎರಡೂವರೆ ವರ್ಷದ ಪುಟಾಣಿ ಮಗುವಿನ ಮೇಲೆ ಬೇಸಿಗೆ ಶಿಬಿರದಲ್ಲಿ ನೃತ್ಯ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿರುವ ಹೀನಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಅತ್ಯಾಚಾರದ ಈ ಘಟನೆ ಉಲ್ಲಾಸ್‌ನಗರದಲ್ಲಿ ನಡೆದಿದ್ದು, 45 ವರ್ಷದ ನೃತ್ಯ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಮಗು ಶಿಬಿರದ ನಂತರ ತೀವ್ರ ನೋವು ಅನುಭವಿಸುತ್ತಿತ್ತು. ಮಾತು ಸರಿಯಾಗಿ ಹೇಳಲಾಗದ ವಯಸ್ಸಿನ ಮಗುವು ಏನಾಯಿತೆಂದು ತಾಯಿ–ತಂದೆಗಳಿಗೆ ವಿವರಿಸಲು ಸಾಧ್ಯವಾಗದೆ ಕಷ್ಟಪಡುತ್ತಿತ್ತು. ಮಗುವಿನ ಅಸ್ವಾಭಾವಿಕ ವರ್ತನೆ ಗಮನಿಸಿದ ಪೋಷಕರು ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು.
ವೈದ್ಯರ ಪರೀಕ್ಷೆಯಲ್ಲಿ ಅತ್ಯಾಚಾರದ ಶಂಕಿತ ಅಂಶಗಳು ಪತ್ತೆಯಾಗಿದ್ದು, ಪೋಷಕರು ಕೂಡಲೇ ವಿಠ್ಠಲವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದರು.
ಉಲ್ಲಾಸ್‌ನಗರ ಡಿಸಿಪಿ ಸಚಿನ್ ಗೋರ್ ಮತ್ತು ವಿಠ್ಠಲವಾಡಿ ಠಾಣೆ ಇನ್ಸ್‌ಪೆಕ್ಟರ್ ಅನಿಲ್ ಪಡ್ವಾಲ್ ಅವರ ನೇತೃತ್ವದಲ್ಲಿ, ಆರೋಪಿಯನ್ನು ಅವನ ಮನೆಯಿಂದ ಬಂಧಿಸಲಾಗಿದೆ. ತದನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














