ಹೈದರಾಬಾದ್: ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ಸಂಬಂಧ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನುವ ಸುದ್ದಿ ಚರ್ಚೆಯಲ್ಲಿರುವಾಗಲೇ ಇದೇ ಪ್ರಕರಣ ಸಂಬಂಧ ಮತ್ತೊಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಅಲ್ಲು ಅರ್ಜುನ್ ಅವರ ಬೌನ್ಸರ್ ಆಂಟೋನಿ ಅವರನ್ನು ಹೈದರಬಾದ್ ಪೊಲೀಸರು ಮಂಗಳವಾರ(ಡಿ.24 ರಂದು) ಬಂಧಿಸಿರುವುದಾಗಿ ವರದಿಯಾಗಿದೆ.
ಆಂಟೋನಿ ಅಲ್ಲು ಅರ್ಜುನ್ ಥಿಯೇಟರ್ಗೆ ಭೇಟಿ ನೀಡುವ ಸಂದರ್ಭದಲ್ಲಿ ಬೌನರ್ಸ್ಗಳ ನೇತೃತ್ವವನ್ನು ವಹಿಸಿದ್ದರು. ಇದಲ್ಲದೆ ಅಲ್ಲು ಅವರ ಫ್ಯಾನ್ಸ್ಗಳನ್ನು ಆಂಟೋನಿ ತಳ್ಳಿದ್ದರಿಂದ ಕಾಲ್ತುಳಿತ ಉಂಟಾಗಿದೆ ಎನ್ನಲಾಗಿದೆ. ಹಾಗಾಗಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಫ್ಯಾನ್ಸ್ಗಳನ್ನು ತಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕಾಲ್ತುಳಿತದಲ್ಲಿ ರೇವತಿ ಎನ್ನುವ ಮಹಿಳೆ ಮೃತಪಟ್ಟಿದ್ದು, ಅವರ ಮಗ ಗಾಯಗೊಂಡಿದ್ದರು.
ಮಧ್ಯಂತರ ಜಾಮೀನು ಪಡೆದು ಆಚೆ ಬಂದಿರುವ ಅರ್ಲು ಅರ್ಜುನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸುದ್ದಿ ಹೊರಬಿದ್ದ ಕೆಲ ಗಂಟೆಯಲ್ಲೇ ಅಲ್ಲು ಅರ್ಜುನ್ ಅವರ ಬೌನ್ಸರ್ ಬಂಧನವಾಗಿರುವ ವಿಚಾರ ಬಹಿರಂಗವಾಗಿದೆ.
ಸದ್ಯ ಈ ಪ್ರಕರಣದಲ್ಲಿ ಆಂಧ್ರದಲ್ಲಿ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ.














