ಮನೆ ರಾಜ್ಯ ಮುಗಿಯದ ಗೊಂದಲ: ಸುರಪುರ ನಾಯಕರ ಸಾಂಸ್ಕೃತಿಕ ಕೊಡುಗೆಗೆ ಪಠ್ಯದಲ್ಲಿ ಕತ್ತರಿ

ಮುಗಿಯದ ಗೊಂದಲ: ಸುರಪುರ ನಾಯಕರ ಸಾಂಸ್ಕೃತಿಕ ಕೊಡುಗೆಗೆ ಪಠ್ಯದಲ್ಲಿ ಕತ್ತರಿ

0

ಬೆಂಗಳೂರು(Bengaluru): 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ಸುರಪುರ ನಾಯಕರ ಸಾಂಸ್ಕೃತಿಕ ಕೊಡುಗೆಯ ವಿವರಗಳನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಸಂಪೂರ್ಣವಾಗಿ ಕೈಬಿಟ್ಟಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಈ ಹಿಂದಿನ ಸಮಿತಿ ಪರಿಷ್ಕರಿಸಿದ್ದ ಪಠ್ಯ ಪುಸ್ತಕದಲ್ಲಿ ಸುರಪುರ ನಾಯಕರ ಹೋರಾಟ ಮತ್ತು ಕೊಡುಗೆಯ ಕುರಿತು ವಿವರವಾಗಿ ಬರೆಯಲಾಗಿತ್ತು.

ಸುರಪುರ ನಾಯಕರು ರಾಜಕೀಯ ಚರಿತ್ರೆಯಂತೆಯೇ ಅವರು ಸಾಂಸ್ಕೃತಿಕ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕೆರೆ, ಬಾವಿ, ದೇವಾಲಯ, ಅರಮನೆ, ಕೋಟೆ– ಕೊತ್ತಲುಗಳನ್ನು ಕಟ್ಟಿಸಿದ್ದಾರೆ. ಅನೇಕರಿಗೆ ಜಹಗೀರುಗಳನ್ನು ನೀಡಿದ್ದಾರೆ. ಅಲ್ಲದೆ, ಇವರ ಕುಲದೇವರಾದ ತಿರುಪತಿ ವೆಂಕಟರಮಣ ಮತ್ತು ಗೋಪಾಲಸ್ವಾಮಿಯ ನಿತ್ಯ ಪೂಜೆಗಾಗಿ ಹಾಗೂ ಉತ್ಸವಗಳಿಗಾಗಿ ಜಹಗೀರು, ಇನಾಮು ಭೂಮಿಯನ್ನು ನೀಡಿದ್ದಾರೆ.

ಇವರ ಆಸ್ಥಾನದಲ್ಲಿ ಅನೇಕ ಕಲಾಕಾರರು, ಗಾಯಕರು, ಚಿತ್ರಕಾರರು, ಶಿಲ್ಪಿಗಳು, ಸಾಹಿತಿಗಳು, ಆಶ್ರಯಿತರಾಗಿದ್ದರು. ಅನೇಕ ಮೌಲ್ಯಯುತ ಸಾಹಿತ್ಯ ಕೃತಿಗಳು ಹೊರಬಂದಿವೆ. ಸರ್ವಧರ್ಮ ಸಹಿಷ್ಣುಗಳಾಗಿದ್ದರು. ಅಲ್ಲದೆ, ‘ಚಿತ್ರಕಲೆಯಲ್ಲಿ ಸುರಪುರ ನಾಯಕ ಅರಸು ಮನೆತನಕ್ಕೆ ಅಗ್ರಸ್ಥಾನವಿತ್ತು. ಅಲ್ಲಿಯ ಚಿತ್ರಗಳ ತಂತ್ರ ಮತ್ತು ವಿನ್ಯಾಸ ಉನ್ನತ ಸ್ಥಾನ ಪಡೆದಿದೆ.  

ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳು, ವಿಜಯನಗರದ ಶೈಲಿಯ ಚಿತ್ರಗಳು, ಬಿಜಾಪುರದ ಆದಿಲ್‌ಶಾಹಿ ಮನೆತನದವರಿಂದ ಮೂಡಿ ಬಂದ ಕಲಾಕೃತಿಗಳಿಗಿಂತ ಸುರಪುರ ನಾಯಕ ಅರಸರ ಕಲಾಕೃತಿಗಳು ತಮ್ಮದೇ ಆದ ವಿಶಿಷ್ಟತೆಯನ್ನು ಪಡೆದಿವೆ. ಲಂಡನ್ನಿನ ಕಲಾ ಸಂಗ್ರಹಾಲಯ, ಇಂಗ್ಲೆಂಡಿನ ವಿವಿಧ ನಗರಗಳಲ್ಲಿ, ದೆಹಲಿ, ಮುಂಬೈ ಹೈದರಾಬಾದ್‌ನ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಸಾಲಾರಜಂಗ್ ವಸ್ತು ಸಂಗ್ರಹಾಲಯದಲ್ಲಿ ಇಂತಹ ಕಲಾಕೃತಿ ನೋಡಬಹುದು  ಎಂಬ ಭಾಗವನ್ನೂ ಸಮಿತಿ ಕೈಬಿಟ್ಟಿದೆ.