ಮನೆ ಕಾನೂನು ವೈಯಕ್ತಿಕ ಹಿತಾಸಕ್ತಿಗೆ ಪಿಐಎಲ್ ಹಾಕಿದರೆ ಅರ್ಜಿದಾರರಿಗೆ ೫೦,೦೦೦ ದಂಡ: ಹೈಕೋರ್ಟ್

ವೈಯಕ್ತಿಕ ಹಿತಾಸಕ್ತಿಗೆ ಪಿಐಎಲ್ ಹಾಕಿದರೆ ಅರ್ಜಿದಾರರಿಗೆ ೫೦,೦೦೦ ದಂಡ: ಹೈಕೋರ್ಟ್

0

ಬೆಂಗಳೂರು(Bengaluru): ಕ್ಷುಲ್ಲಕ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಅರ್ಜಿದಾರರಿಗೆ ಕನಿಷ್ಟ ೫೦ ಸಾವಿರ ರೂ.ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್ ಶುಕ್ರವಾರ ಮೌಖಿಕ ಎಚ್ಚರಿಕೆ ನೀಡಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಡಮಾರನಹಳ್ಳಿ ಕೆರೆ ಜಾಗ ಒತ್ತುವರಿ ಮಾಡಿ ಮಸೀದಿ ಹಾಗೂ ಸ್ಮಶಾನ ನಿರ್ಮಾಣ ಮಾಡಲಿದ್ದು, ಒತ್ತುವರಿ ತೆರವು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ವಕೀಲರ ವಾದ ಮಂಡನೆಯಲ್ಲಿ ಅರ್ಜಿದಾರರ ವೈಯಕ್ತಿಕ ಹಿತಾಸಕ್ತಿ ಇರುವ ಅನುಮಾನಗಳು ಬಂದಿದ್ದು ಮತ್ತು ನಂತರ ಪಿಐಎಲ್ ವಾಪಸ್ ಪಡೆಯುವುದಾಗಿ ಮೆಮೋ ಸಲ್ಲಿಸಿದ ಬೆಳವಣಿಗೆ ಗಮನಿಸಿದ ಹಂಗಾಮಿ ಸಿಜೆ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿದೆ.
’ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವಕೀಲರು ತಮ್ಮ ಕಕ್ಷಿದಾರರ ವೈಯಕ್ತಿಕ ಹಿತಾಸಕ್ತಿಗೆ ಪೂರಕವಾಗಿ ವಾದ ಮಂಡಿಸುವುದು ಬೇಸರದ ಸಂಗತಿ. ಪಿಐಎಲ್ ವಿಚಾರಣೆಗೆ ಅವಸರ ಮಾಡುವುದು, ಸೀನಿಯರ್ ಬ್ಯುಸಿ ಇದ್ದಾರೆ, ಆರೋಗ್ಯ ಸರಿ ಇಲ್ಲ ಎಂಬ ಕಾರಣಗಳನ್ನು ನೀಡಿ ಮುಂದೂಡಿಕೆಗೆ ಮನವಿ ಮಾಡುವುದು ಅಥವಾ ಪಿಐಎಲ್ ವಾಪಸ್ ತೆಗೆದುಕೊಳ್ಳುವುದು ನ್ಯಾಯ ಸಮ್ಮತ ನಡೆ ಅಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಯಾವುದೇ ಕಾರಣಕ್ಕೂ ವೈಯಕ್ತಿಕ ಹಿತಾಸಕ್ತಿ ಅಡಗಿರಬಾರದು. ಸಾರ್ವಜನಿಕ ಮಹತ್ವದ ವಿಷಯವನ್ನು ವಕೀಲರು ಅಥವಾ ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಾಗ ಅದು ಕೋರ್ಟ್‌ನ ವಿಷಯ ಆಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
೨೫ ಸಾವಿರ ರೂ. ದಂಡ: ಅರ್ಜಿ ವಿಚಾರಣೆ ವೇಳೆ, ’ನ್ಯಾಯದ ಹಿತದೃಷ್ಟಿಯಿಂದ’ ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲು ಅನುಮತಿ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಜು.೭ರಂದು ಮೆಮೋ ಸಲ್ಲಿಸಿದ್ದರು. ಇದಕ್ಕೆ ಪೀಠ, ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಅರ್ಜಿ ವಾಪಸ್ ಪಡೆದುಕೊಳ್ಳುವ ನಿಮ್ಮ ಮನವಿ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರಿಗೆ ೨೫ ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿತು.

ಹಿಂದಿನ ಲೇಖನಅಮರನಾಥ ಮೇಘಸ್ಪೋಟ: ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭ
ಮುಂದಿನ ಲೇಖನಮಳೆ ಬಂದ್ರೆ ಯಾಕೆ ಬಂತು ಅಂತಾ ಕೇಳ್ತೀರಾ, ಬಾರದಿದ್ದರೆ ಯಾಕೆ ಬರಲಿಲ್ಲ ಅಂತೀರಾ ? : ಈಶ್ವರಪ್ಪ ಉಡಾಫೆ ಉತ್ತರ