ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಯಕ್ರಮಕ್ಕೆ ತೊಂದರೆ ಕೊಡುವ ಕೆಟ್ಟ ಯೋಚನೆ ಇ.ಡಿ ಗೆ ಯಾಕೆ ಬಂತು. ಹಿಂದೆ ಹಲವು ಪ್ರಕರಣಗಳಲ್ಲಿ ತನಿಖೆ ಮಾಡಿದಾಗ ಪ್ರೆಸ್ ನೋಟ್ ಕೊಟ್ಟಿದ್ರಾ? ಅಂದು ದಾಳಿ ಮಾಡಿದಾಗ ಪ್ರೆಸ್ ನೋಟ್ ಕೊಡದ ಇ.ಡಿ ಅಧಿಕಾರಿಗಳು ಕಾಂಗ್ರೆಸ್ ಸಮಾವೇಶಕ್ಕೆ ತೊಂದರೆ ಕೊಡುವುದಕ್ಕಾಗಿ ಈಗ ಪ್ರೆಸ್ ನೋಟ್ ಕೊಟ್ಟಿದ್ದಾರೆ. ಇ.ಡಿ ಬಿಜೆಪಿಯ ಅಂಗ ಸಂಸ್ಥೆಯೇ ಎಂದು ಸಚಿವ ಎಚ್.ಕೆ.ಪಾಟೀಲ ಇ.ಡಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಮುಡಾ ಪ್ರಕರಣದಲ್ಲಿ 300 ಕೋಟಿ ರೂ. ಆಸ್ತಿ ಜಪ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇ.ಡಿ ಅವರು ತಮ್ಮ ಕೆಲಸ ಮಾಡುವುದು ಬಿಟ್ಟು ಪ್ರೆಸ್ ನೋಟ್ ಕೊಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಶಕ್ತಗೊಳಿಸುವುದಾಗಿದೆ. ಈ ವಿಚಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದಿತ್ತು. ಅಧಿಕಾರಿಗಳು ಮಾಡಿರುವ ಕಾರ್ಯ ನ್ಯಾಯಾಲಯದ ಮೇಲೆ ಒತ್ತಡ ತರುವ ತಂತ್ರವಾಗಿದೆ. ಪ್ರೆಸ್ ನೋಟ್ ಕೊಡಲು ರಾಜಕೀಯ ಒತ್ತಡವಿತ್ತಾ. ಸಿದ್ದರಾಮಯ್ಯ ವಿರೋಧಿಗಳು ಬಹಿರಂಗಪಡಿಸಲು ಹೇಳಿದ್ರಾ ಎಂದು ಪ್ರಶ್ನಿಸಿದ ಪಾಟೀಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಒತ್ತಾಯ ವಿಚಾರಕ್ಕೆ ಮಾತನಾಡಿ, ಸೈಟ್ ಗಳನ್ನ ಈಗಾಗಲೇ ವಾಪಾಸ್ ಕೊಟ್ಟಿದ್ದಾರಲ್ಲ ಎಂದರು.
ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಮುಗಿದುಹೋದ ವಿಷಯ. ಯಾವಾಗ, ಯಾವುದನ್ನು ಬದಲಾವಣೆ ಮಾಡಬೇಕು ಎಂಬುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಮಾತನಾಡದಂತೆ ಹೈಕಮಾಂಡ್ ಸೂಚಿಸಿದ್ದು, ಇದರ ಬಗ್ಗೆ ಮಾತನಾಡುವುದು ವ್ಯರ್ಥ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ.ನೂತನ ಶಾಸಕರ್ಯಾರು ಪ್ರವಾಸಕ್ಕೆ ಹೋಗಿಲ್ಲ. ಈ ಮಾಹಿತಿ ತಪ್ಪಾಗಿದೆ. ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಬೇಕು ಎಂಬ ವಿಚಾರಕ್ಕೆ ಮಾತನಾಡಿದ ಸಚಿವ ಪಾಟೀಲ, ನಾನು ಕಾಂಗ್ರೆಸ್ ಕಾರ್ಯಕರ್ತ. ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡದಂತೆ ಸೂಚಿಸಿರುವಾಗ ಎಲ್ಲರೂ ಅವರ ಮಾತಿಗೆ ಗೌರವ ಕೊಡಬೇಕು ಎಂದರು.














