ಬೆಂಗಳೂರು: ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು ಮೇ 2ರಂದು ಪ್ರಕಟಿಸುವ ಸಾಧ್ಯತೆ ಬಗ್ಗೆ ಮಹತ್ವದ ಸುಳಿವು ದೊರೆತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ತೀವ್ರ ನಿರೀಕ್ಷೆಗೆ ಕೊನೆಗೂ ಉತ್ತರ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿದ್ದಾರೆ.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ 8.96 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 6 ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 55 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗಿದೆ.
ಮೌಲ್ಯಮಾಪನ ಕಾರ್ಯ ಮುಕ್ತಾಯಗೊಂಡಿರುವ ಕಾರಣ, ಇದೀಗ ಕಂಪ್ಯೂಟರ್ ಮೂಲಕ ಅಂಕಗಳನ್ನು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲು ರಾಜ್ಯ ಶಿಕ್ಷಣ ಮಂಡಳಿ ಸಜ್ಜಾಗಿದೆ. ಮೂಲಗಳ ಪ್ರಕಾರ, ಮೇ 2ರಂದು ಫಲಿತಾಂಶ ಪ್ರಕಟಿಸಲು ಸಾಧ್ಯವಾಗಲಿದೆ.
ವಿದ್ಯಾರ್ಥಿಗಳು ಪರೀಕ್ಷೆ-1ರಲ್ಲಿ ತೃಪ್ತಿಕರ ಅಂಕಗಳನ್ನು ಪಡೆಯದಿದ್ದರೆ ಅಥವಾ ಉತ್ತೀರ್ಣರಾಗದಿದ್ದರೆ, ಅವರಿಗೆ ಇನ್ನೂ ಅವಕಾಶಗಳಿವೆ. ಪರೀಕ್ಷೆ-2 ಮತ್ತು ಪರೀಕ್ಷೆ-3 ಎಂಬ ದ್ವಿತೀಯ ಮತ್ತು ತೃತೀಯ ಅವಕಾಶಗಳನ್ನು ಒದಗಿಸಲಾಗಿದ್ದು, ಈ ಪರೀಕ್ಷೆಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಲಿವೆ. ಈ ಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಹಾಗೂ ಉತ್ತಮ ಅಂಕಗಳನ್ನು ಪಡೆಯಲು ಸಹಾಯ ಮಾಡುವಂತಿದೆ.













