ಆನೇಕಲ್ (ಬೆಂಗಳೂರು ಗ್ರಾಮಾಂತರ): ನಡುರಸ್ತೆಯಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಏಳೆಂಟು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿರುವ ಘಟನೆ ಬೆಂಗಳೂರಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.
ತನ್ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಪತಿ ಈ ಕೃತ್ಯ ಎಸಗಿದ್ದಾನೆ.
ಶ್ರೀಗಂಗಾ (29) ಕೊಲೆಯಾದ ಮಹಿಳೆ. ಮೋಹನ್ ರಾಜು (32) ಪತ್ನಿಯನ್ನು ಕೊಲೆಗೈದ ಪತಿ ಮಹಾಶಯ.
ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿರುವ ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. ಆದ್ರೆ, ಮೋಹನ್ ರಾಜ್ ಸ್ನೇಹಿತನ ಜೊತೆಗೆ ಶ್ರೀಗಂಗಾ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನ ಇತ್ತು. ಈ ಸಂಬಂಧ ಎರಡ್ಮೂರು ವರ್ಷದಿಂದ ಮೋಹನ್ ರಾಜ್ ಪತ್ನಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ.
ಕೊನೆಗೆ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ 8 ತಿಂಗಳಿನಿಂದ ಮೋಹನ್ ರಾಜ್ ಹಾಗೂ ಶ್ರೀಗಂಗಾ ದೂರವಾಗಿದ್ದರು. ಆದ್ರೆ, ನಿನ್ನೆ(ಫೆಬ್ರವರಿ 04) ರಾತ್ರಿ ಮೋಹನ್ ರಾಜ್ ತನ್ನ ಮಗುವನ್ನ ನೋಡಲು ಶ್ರೀಗಂಗಾಳ ಮನೆಗೆ ತೆಳಿದ್ದ. ಆ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ.
ಇದರಿಂದ ಕೋಪಗೊಂಡಿದ್ದ ಮೋಹನ್ ರಾಜ್, ಶ್ರೀಗಂಗಾಳನ್ನು ಕೊಲೆ ಮಾಡಬೇಕೆಂದು ನಿರ್ಧಾರಕ್ಕೆ ಬಂದಿದ್ದಾನೆ. ಅದರಂತೆ ಇಂದು (ಫೆಬ್ರವರಿ 05) ಬೆಳಗ್ಗೆ ಶ್ರೀಗಂಗಾ ಮಗುವನ್ನ ಶಾಲೆಗೆ ಬಿಡಲು ಬೈಕ್‌ನಲ್ಲಿ ಬಂದಿದ್ದಳು. ಈ ವೇಳೆ ಕಾದು ಕುಳಿತಿದ್ದ ಪತಿ ಮೋಹನ್ ರಾಜ್ ಪತ್ನಿ ಶ್ರೀಗಂಗಾ ಮೇಲೆ ಅಟ್ಯಾಕ್ ಮಾಡಿದ್ದು, ಏಳೆಂಟು ಬಾರಿ ಚಾಕುವಿನಿಂದ ಇರಿದು ತನ್ನ ಸಿಟ್ಟು ತೀರಿಸಿಕೊಂಡಿದ್ದಾನೆ
ಇನ್ನು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದ ಶ್ರೀಗಂಗಾಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.














