ಮನೆ ರಾಜಕೀಯ ಡಬಲ್ ಇಂಜಿನ್ ಸರ್ಕಾರವಿಲ್ಲ ಎಂದರೆ ಜನರಿಗೆ ಡಬಲ್ ಬರೆ: ಪ್ರಧಾನಿ ಮೋದಿ

ಡಬಲ್ ಇಂಜಿನ್ ಸರ್ಕಾರವಿಲ್ಲ ಎಂದರೆ ಜನರಿಗೆ ಡಬಲ್ ಬರೆ: ಪ್ರಧಾನಿ ಮೋದಿ

0

ಬೆಂಗಳೂರು: ಡಬಲ್ ಇಂಜಿನ್ ಸರ್ಕಾರ ಇಲ್ಲವೆಂದರೆ ಜನರಿಗೆ ಡಬಲ್ ಬರೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಆರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Join Our Whatsapp Group

ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಡಿಜಿಟಲ್ ಮಹಾ ಸಂವಾದದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಬಿಜೆಪಿ ಪ್ರತಿ ಚುನಾವಣೆಯನ್ನು ಹಬ್ಬದ ರೀತಿ ಆಚರಿಸುತ್ತದೆ ಎಂದು ತಿಳಿಸಿದರು.

2014ಕ್ಕೂ ಮೊದಲು ಒಂದು ಮನೆ ನಿರ್ಮಾಣ ಆಗುವುದಕ್ಕೆ 300 ದಿನ ಬೇಕಾಗಿತ್ತು. ಬಿಜೆಪಿ ಬಂದ ಮೇಲೆ 100 ದಿನಗಳಲ್ಲಿ ಮನೆ ನಿರ್ಮಾಣ ಆಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಮನೆ ನಿರ್ಮಾಣ ಮಾಡುತ್ತಿದ್ದೇವೆ. ಬಡವರಿಗೆ ಸುಸಜ್ಜಿತವಾಗಿ ಮನೆ ನಿರ್ಮಿಸಿ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಕರ್ನಾಟಕದ ಯುವಕರ ಉಜ್ವಲ ಭವಿಷ್ಯಕ್ಕಾಗಿ ಹಲವು ಯೋಜನೆಗಳು ಜಾರಿಗೆ ಬರಲಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಲಾಭ ಆಗುತ್ತಿದೆ. ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್ ಆಸ್ಪತ್ರೆ ನಿರ್ಮಿಸಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಏಮ್ಸ್ ಆಸ್ಪತ್ರೆಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ಬಡವರಿಗೆ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪು ನಾವೆಲ್ಲರೂ ಸ್ವಾಗತಿಸಬೇಕು. ಆದರೆ, ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಬಲಪಡಿಸಬೇಕು ಎಂದು ಮೋದಿ ಕರೆ ನೀಡಿದರು.

ಕರ್ನಾಟಕದ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸಬೇಕಿದೆ. ಅವರ ಪ್ರಗತಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ದೇಶದ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷ ಸದಾ ಶ್ರಮಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಅಕ್ಕಿ ವಿತರಣೆ ನೀಡಿದ್ದೇವೆ. ಬಿಜೆಪಿಗೆ ಬಡವರ ಬಗ್ಗೆ ಅಪಾರ ಕಾಳಜಿ ಇದೆ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಕುವೆಂಪು, ಕನಕದಾಸರು, ಶಿವ ಶರಣರ ಬಗ್ಗೆ ಉಲ್ಲೇಖಿಸಿದರು. ಕನ್ನಡ ಭಾಷೆ ಸಮೃದ್ಧ ಸಾಹಿತ್ಯವನ್ನು ಹೊಂದಿದೆ. ಕರ್ನಾಟಕದ ಜನರನ್ನು ದಶಕದಿಂದಲೂ ನಾನು ನೋಡುತ್ತಿದ್ದೇನೆ. ರಾಜಕೀಯಕ್ಕೆ ಬರುವ ಮೊದಲು ಹಲವು ಬಾರಿ ಕರ್ನಾಟಕಕ್ಕೆ ಬಂದಿದ್ದೇನೆ ಎಂದು ಪ್ರಧಾನಿ ಹೇಳಿದರು.

ಹಿಂದಿನ ಲೇಖನನಮಗೆ ಹಣಕಾಸಿನ ಸಮಸ್ಯೆಗಳಿವೆ, ಆದರೆ ಜನ ಬಲವಿದೆ: ಎಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನವಿಧಾನಸಭಾ ಚುನಾವಣೆ: ಮೈಸೂರು ಜಿಲ್ಲೆಯಾದ್ಯಂತ 29 ಅರೆ ಸೇನಾಪಡೆ ತುಕಡಿ ನಿಯೋಜನೆ