ಮನೆ ರಾಜ್ಯ ಶಿರೂರು ಗುಡ್ಡ ಕುಸಿತ ದುರಂತಕ್ಕೆ ನೀರಿನ ಒತ್ತಡ ಕಾರಣ: ಅಧ್ಯಯನ ವರದಿ

ಶಿರೂರು ಗುಡ್ಡ ಕುಸಿತ ದುರಂತಕ್ಕೆ ನೀರಿನ ಒತ್ತಡ ಕಾರಣ: ಅಧ್ಯಯನ ವರದಿ

0

ಕಾರವಾರ: ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ಅವಘಡಗಳಲ್ಲಿ ಒಂದೆನಿಸಿದ ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿತ ದುರಂತಕ್ಕೆ ತೀವ್ರ ಸ್ವರೂಪದ ಮಳೆ ಮತ್ತು ಮಾನವ ನಿರ್ಮಿತ ಚಟುವಟಿಕೆಗೆ ಗುಡ್ಡಕ್ಕೆ ಹಾನಿ ಮಾಡಿದ್ದು ಕಾರಣ ಎಂಬುದಾಗಿ ಸುರತ್ಕಲ್‍ನ ಕರ್ನಾಟಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್‍ಐಟಿಕೆ) ತಜ್ಞ ಪ್ರಾಧ್ಯಾಪಕರ ಅಧ್ಯಯನ ವರದಿ ಖಚಿತಪಡಿಸಿದೆ.

Join Our Whatsapp Group

ಶಿರೂರು ದುರಂತಕ್ಕೆ ಕಾರಣವಾಗಿರಬಹುದಾದ ಅಂಶಗಳ ಕುರಿತು ಸ್ವತಂತ್ರವಾಗಿ ಅಧ್ಯಯನ ನಡೆಸಿದ ಎನ್ಐಟಿಕೆಯ ವಿವಿಧ ವಿಭಾಗಗಳ ತಜ್ಞರಾದ ಶ್ರೀವಲ್ಸ್ ಕೊಲತಯಾರ್, ಯು.ಪ್ರಥ್ವಿರಾಜ್, ಪ್ರಿಯಜಿತ್ ಕುಂದು ಮತ್ತು ವರುಣ್ ಮೆನನ್ ಸಲ್ಲಿಸಿದ ವರದಿಯನ್ನು ಚೀನಾ ಸರ್ಕಾರದ ತುರ್ತು ನಿರ್ವಹಣಾ ಸಚಿವಾಲಯದ ಅಧಿಕೃತ ನೈಸರ್ಗಿಕ ಅಪಾಯಗಳ ಸಂಶೋಧನಾ ಜರ್ನಲ್‍ನಲ್ಲಿ ಪ್ರಕಟಿಸಲು ಸಲ್ಲಿಕೆಯಾಗಿದೆ.

ಶಿರೂರು ದುರಂತದ ಬಳಿಕ ಜೊಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರು ಸ್ಥಳ ಪರಿಶೀಲಿಸಿದ್ದು ಹೊರತುಪಡಿಸಿದರೆ ದುರಂತಕ್ಕೆ ನಿಖರ ಕಾರಣ ಎಂಬುದರ ಬಗ್ಗೆ ಅಧಿಕೃತವಾಗಿ ಸರ್ಕಾರದಿಂದ ತಜ್ಞರ ತಂಡವು ಅಧ್ಯಯನ ನಡೆಸಿರಲಿಲ್ಲ. ಸುರತ್ಕಲ್‍ನ ಎನ್ಐಟಿಕೆ ತಂಡವು ನಡೆಸಿದ ಅಧ್ಯಯನದಲ್ಲಿ ದುರಂತಕ್ಕೆ ಕಾರಣವಾಗಿರುವ ನಿಖರ ಅಂಶಗಳನ್ನು ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಗುಡ್ಡವನ್ನು ಲಂಬ ಕೋನದಲ್ಲಿ ಕತ್ತರಿಸುವ ಮೂಲಕ ಇಳಿಜಾರು ಇಲ್ಲದಂತೆ ಮಾಡಿ, ಗುಡ್ಡದ ಧಾರಣ ಸಾಮರ್ಥ್ಯ ಕ್ಷೀಣಿಸುವಂತೆ ಮಾಡಲಾಗಿತ್ತು. ಗುಡ್ಡ ಕುಸಿತ ಸಂಭವಿಸಿದ ಹಿಂದಿನ ದಿನ (ಜು.15) ಅಂಕೋಲಾ ತಾಲ್ಲೂಕಿನಲ್ಲಿ 26 ಸೆಂ.ಮೀನಷ್ಟು ಮಳೆ ಸುರಿದಿತ್ತು. ಅದಕ್ಕೂ ನಾಲ್ಕು ದಿನ ಮುಂಚಿತವಾಗಿ ಸರಾಸರಿ 19.8 ಸೆಂ.ಮೀನಷ್ಟು ಮಳೆ ಬಿದ್ದಿತ್ತು. ಇದರಿಂದ ಅಪಾರ ಪ್ರಮಾಣ ನೀರು ಗುಡ್ಡದಿಂದ ಇಳಿಯತೊಡಗಿತು. ನೀರಿನ ಒತ್ತಡಕ್ಕೆ ಮಣ್ಣಿನ ಪದರವೊಂದು ತಿರುಚಿಕೊಂಡು ಕುಸಿತ ಉಂಟಾಯಿತು ಎಂದು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಂಶೋಧಕ ಶ್ರೀವಲ್ಸ ಕೊಲತಯಾರ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಮರಳು ಮಿಶ್ರಿತ ಜೇಡಿ ಮಣ್ಣು ಮತ್ತು ಕಲ್ಲಿನ ಪದರಗಳನ್ನು ಗುಡ್ಡ ಹೊಂದಿತ್ತು. ಗುಡ್ಡದ ಬುಡದಲ್ಲಿರುವ ಕಲ್ಲಿನ ಪದರಗಳನ್ನು ಲಂಬಕೋನ ಆಕೃತಿಯಲ್ಲಿ ಕತ್ತರಿಸಲಾಗಿತ್ತು. ಇದು ಮಣ್ಣನ್ನು ಸದೃಢವಾಗಿ ಹಿಡಿದಿಡುವ ಸಾಮರ್ಥ್ಯ ಹೊಂದಿತ್ತಾದರೂ ನೀರಿನ ಒತ್ತಡ ಹೆಚ್ಚಿದ್ದರಿಂದ ಮಣ್ಣಿನ ಪದರಗಳು ಸಡಿಲಗೊಂಡು ಕುಸಿದವು ಎಂದು ವಿವರಿಸಿದ್ದಾರೆ.

ಮಣ್ಣು ಗುಣ ಅಧ್ಯಯನ ನಡೆಸಲು ಸಲಹೆ

ಶಿರೂರು ದುರಂತದಂತೆ ಪುನಃ ಭೂಕುಸಿತ ದುರಂತ ತಡೆಯಲು ಗುಡ್ಡ ಅಗೆಯುವ ಮುನ್ನ ಮಣ್ಣಿನ ಗುಣಗಳ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಅದಕ್ಕೆ ಪೂರಕವಾಗಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಮಣ್ಣು ತೆರವು ಪ್ರಕ್ರಿಯೆ ನಡೆಸಬಹುದು. ಗುಡ್ಡ ಕತ್ತರಿಸುವ ವೇಳೆ ಹಂತ ಹಂತದ ಇಳಿಜಾರು ಮಾದರಿ ಇರಲಿ. ಕತ್ತರಿಸಿದ ಗುಡ್ಡದ ಬುಡದಲ್ಲಿ ಭೂಕುಸಿತ ತಡೆಗೆ ರಕ್ಷಣಾ ತಡೆಗೋಡೆ ನಿರ್ಮಿಸುವುದು ಸೂಕ್ತ ಎಂದು ತಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.