ಕೋಲಾರ: ಕಳೆದ ಎರಡು ತಿಂಗಳಿಂದ ಕೋಲಾರ ನಗರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಸಿಕ್ಕ ಸಿಕ್ಕಿದ್ದನ್ನು ದೋಚಿ ಪರಾರಿಯಾಗುತ್ತಿದ್ದ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಬೆಂಗಳೂರಿನ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ನ ಮಾಸ್ಟರ್ ಮೈಂಡ್ ರೋಹಿತ್, ರಿಯಾನ್, ಪ್ರವೀಣ್ ಕುಮಾರ್, ವಿನೋದ್, ದಾದಾಪೀರ್ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಒಟ್ಟು ಏಳು ಜನರನ್ನು ಕೋಲಾರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಮೂರು ಬೈಕ್ ಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಕಳೆದ ಏಳೆಂಟು ವರ್ಷಗಳಿಂದ ಮಂಕಿಕ್ಯಾಪ್ ಧರಿಸಿ ಬಂದು ಸಿಕ್ಕ ಸಿಕ್ಕ ಅಂಗಡಿಗಳ ಶೆಟರ್ ಮುರಿದು ಸಿಕ್ಕಷ್ಟು ಹಣ ದೋಚಿಕೊಂಡು ಪರಾರಿಯಾಗಿ ಪೊಲೀಸರ ಹಾಗೂ ಸಾರ್ವಜನಿಕರ ನಿದ್ದೆಗೆಡಿಸಿದ್ದ. ಕೋಲಾರ ನಗರದಲ್ಲಿ ಡಿಸೆಂಬರ್-17 ರ ರಾತ್ರಿ ಹಾಗೂ ಜನವರಿ-17 ರ ರಾತ್ರಿ ಟೇಕಲ್ ರಸ್ತೆ, ಎಂ.ಬಿ.ರಸ್ತೆಯಲ್ಲಿನ ಆಧೀಶ್ವರ ಮಾರ್ಕೆಟಿಂಗ್, ಅಪೋಲೋ ಮೆಡಿಕಲ್ಸ್, ಸಲೂನ್, ದಿನಸಿ ಅಂಗಡಿ, ಮೊಬೈಲ್ ಅಂಗಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಸಾವಿರಾರು ರೂಪಾಯಿ ದೋಚಿ ಪರಾರಿಯಾಗಿದ್ದರು.
ಇನ್ನು ಈ ಖತರ್ನಾಕ್ ಕಳ್ಳನ ಕೈಚಳಕ ಕಂಡು ಕೋಲಾರ ನಗರ ಬೆಚ್ಚಿಬಿದ್ದಿತ್ತು. ಈ ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು. ಇನ್ನು ಖತರ್ನಾಕ್ ಕಳ್ಳನ ಬೇಟೆಗಾಗಿ ಬಲೆ ಬೀಸಿದ್ದ ಕೋಲಾರ ನಗರ ಠಾಣಾ ಪೊಲೀಸರಿಗೆ ಕಳ್ಳನ ಕುರಿತ ಯಾವುದೇ ಸುಳಿವು ಸಿಕ್ಕಿರಲಿಲ್ಲ, ಆದರೆ ಇದೇ ಗ್ಯಾಂಗ್ ಮತ್ತೊಂದು ಕಳ್ಳತನಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಿಸಿದ ಪೊಲೀಸರಿಗೆ ಖತರ್ನಾಕ್ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದೆ.
ಅಷ್ಟಕ್ಕೂ ಯಾರು ಈ ರೋಹಿತ್ ಅಂತ ನೋಡೋದಾದ್ರೆ ಈತ ಮೂಲತಃ ನೇಪಾಳದವನು. ಕಳೆದ 25 ವರ್ಷಗಳ ಹಿಂದೆಯೇ ರೋಹಿತ್ ತಂದೆ ಧನರಾಜ್ ಗಿರಿ ಎಂಬುವರ ಕರ್ನಾಟಕದ ಬೆಂಗಳೂರಿಗೆ ಬಂದು ನೆಲೆಸಿದ್ದರು. ನಂತರ ಕರ್ನಾಟಕದಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೇ ಕುಟುಂಬದಲ್ಲಿ ಹುಟ್ಟಿದ್ದ ರೋಹಿತ್ ಕಳೆದ ಏಳೆಂಟು ವರ್ಷಗಳಿಂದ ಅಂದರೆ ಈತನ 16ನೇ ವಯಸ್ಸಿಗೆ ಕಳ್ಳತನದ ಕೆಲಸ ಶುರುಮಾಡಿಕೊಂಡಿದ್ದ. ಮನೆಗೆ ಹೋಗದೆ ಬೆಂಗಳೂರಿನ ಸುಧಾಮ ನಗರದ ಸ್ಮಶಾನದಲ್ಲೇ ವಾಸಮಾಡಿಕೊಂಡು ಅಲ್ಲೇ ಇವನು ಇರೋದಕ್ಕೆ ಒಂದು ಸೆಟಪ್ ಮಾಡಿಕೊಂಡಿದ್ದ. ಅಲ್ಲೇ ಊಟ, ಅಲ್ಲೇ ಕುಡಿಯೋದು, ಅಲ್ಲೇ ಮಲಗೋದು, ಅಲ್ಲೇ ಕಳ್ಳತನದ ಸ್ಕೆಚ್ ಕೂಡ ಹಾಕುತ್ತಿದ್ದ.
ಚಿಕ್ಕ ಟೆಂಟ್ ಹಾಕಿಕೊಂಡು ಸ್ಮಶಾನದ ಸುತ್ತಲೂ ಬಿಯರ್ ಬಾಟಲ್ ಕಟ್ಟಿಕೊಂಡು ಯಾರಾದರೂ ಬಂದರೆ ಶಬ್ದವಾಗುತ್ತಿತ್ತು, ಆಗ ಕೂಡಲೇ ಅಲ್ಲಿಂದ ರೋಹಿತ್ ಎಸ್ಕೇಪ್ ಆಗುತ್ತಿದ್ದ. ಹೀಗೆ ತಾನು ಕಳ್ಳತನದ ಹಣದಲ್ಲಿ ಬೈಕ್ಗಳನ್ನು ಖರೀದಿಸಿದ್ದ ರೋಹಿತ್ ನಂಬರ್ ಪ್ಲೇಟ್ ಇಲ್ಲದ ಬೈಕ್ಗಳಲ್ಲಿ ವ್ಹೀಲಿಂಗ್ ಮಾಡುತ್ತಾ ಜಾಲಿಯಾಗಿ ಬೆಂಗಳೂರಿನ ಸುತ್ತಮುತ್ತಲ ನಗರಗಳನ್ನು ಟಾರ್ಗೆಟ್ ಮಾಡುತಿದ್ದ.
ಮಧ್ಯರಾತ್ರಿ ಸುಮಾರಿಗೆ ಹೊರಟರೆ ಬೆಳಿಗ್ಗೆ ಹೊತ್ತಿಗೆ ಕಳ್ಳತನ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ. ಈ ಖತರ್ನಾಕ್ ಕಳ್ಳ ರೋಹಿತ್ ಈವರೆಗೂ ಎರಡು ರಾಜ್ಯ ಹಾಗೂ ಆರು ಜಿಲ್ಲೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಂಗಳೂರು ನಗರ, ರಾಮನಗರ, ತಮಿಳುನಾಡಿನ ಹೊಸೂರು ಪೊಲೀಸರಿಗೆ ಮೋಸ್ಟ್ ವಾಂಟೆಡ್ ಖತರ್ನಾಕ್ ಕಳ್ಳ ಸದ್ಯ ಕೋಲಾರ ಪೊಲೀಸರ ಅತಿಥಿಯಾಗಿದ್ದಾನೆ.