ಮನೆ ಕಾನೂನು ವಿಧಾನಸಭೆ, ಪರಿಷತ್‌ನ 42 ಸದಸ್ಯರಿಗೆ ಸಂಪುಟ ದರ್ಜೆ ಸ್ಥಾನಮಾನಕ್ಕೆ ಆಕ್ಷೇಪಿಸಿ ಪಿಐಎಲ್: ಫೆ.21ಕ್ಕೆ ವಿಚಾರಣೆ

ವಿಧಾನಸಭೆ, ಪರಿಷತ್‌ನ 42 ಸದಸ್ಯರಿಗೆ ಸಂಪುಟ ದರ್ಜೆ ಸ್ಥಾನಮಾನಕ್ಕೆ ಆಕ್ಷೇಪಿಸಿ ಪಿಐಎಲ್: ಫೆ.21ಕ್ಕೆ ವಿಚಾರಣೆ

0

ರಾಜ್ಯ ಕಾಂಗ್ರೆಸ್‌ ಸರ್ಕಾರವು 39 ವಿಧಾನ ಸಭಾ ಸದಸ್ಯರು ಮತ್ತು ವಿಧಾನ ಪರಿಷತ್‌ನ ಮೂವರು ಸದಸ್ಯರಿಗೆ ವಿವಿಧ ನಿಗಮ/ಮಂಡಗಳಿ, ದೆಹಲಿ ವಿಶೇಷ ಪ್ರತಿನಿಧಿಗಳು, ಆಡಳಿತ ಸುಧಾರಣಾ ಆಯೋಗ, ಕೆಆರ್‌ಡಿಬಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕಾನೂನು ಮತ್ತು ರಾಜಕೀಯ ಸಲಹೆಗಾರರನ್ನಾಗಿ ನೇಮಿಸಿ, ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಫೆಬ್ರವರಿ 21ಕ್ಕೆ ಮುಂದೂಡಿದೆ.

Join Our Whatsapp Group

ಬೆಂಗಳೂರಿನ ಸೂರಿ ಪಾಯಲ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಜೆ ಸಾಯಿ ದೀಪಕ್‌ ಅವರು “ರಾಜ್ಯ ಸಂಪುಟದಲ್ಲಿ 34 ಸಚಿವ ಸ್ಥಾನ ಇದ್ದು, ಈಗಾಗಲೇ 33 ಮಂದಿ ಸಂಪುಟದಲ್ಲಿದ್ದಾರೆ. ಈಗ ಮತ್ತೆ 42 ಮಂದಿಗೆ ಹೆಚ್ಚುವರಿಯಾಗಿ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ. ಸಂವಿಧಾನದ 164 (1ಎ)ನೇ ವಿಧಿಯಡಿ ಸಂಪುಟ ಸಚಿವರ ಸ್ಥಾನಮಾನವನ್ನು ವಿಸ್ತರಿಸಬಹುದೇ ಎಂಬ ಪ್ರಶ್ನೆ ಎದುರಾಗಿದೆ. ಸಂವಿಧಾನದ 191ನೇ ವಿಧಿಯಡಿ ಶಾಸಕರನ್ನು ನಿಗಮ/ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಬಹುದು. ಆದರೆ, ಸಂಪುಟ ದರ್ಜೆ ಸಚಿವರ ಸ್ಥಾನಮಾನ ಕಲ್ಪಿಸಲಾಗದು” ಎಂದರು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಪೀಠವು “ಮಹತ್ವದ ವಿಚಾರವನ್ನು ಪ್ರಸ್ತಾಪಿಸುತ್ತಿರುವ ನೀವು ಕಾಂಪೌಂಡ್‌ ಬಳಿ ನಿಂತು ವಾದಿಸುತ್ತಿದ್ದೀರಲ್ಲಾ” ಎಂದಿತು.

ಆಗ ದೀಪಕ್‌ ಅವರು ಅರ್ಜಿ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಿದರೆ ಖುದ್ದು ನ್ಯಾಯಾಲಯಕ್ಕೆ ಬಂದು ವಾದಿಸುವುದಾಗಿ ಹೇಳಿದರು. ಹೀಗಾಗಿ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ನ್ಯಾಯಾಲಯ ಮುಂದೂಡಿತು.

ಗುರು ಗೋವಿಂದ ಬಸು ವರ್ಸಸ್‌ ಶಂಕರಿ ಪ್ರಸಾದ್‌ ಘೋಸಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ನೀಡಿರುವ ತೀರ್ಪಿನ ಅನ್ವಯ ಆಕ್ಷೇಪಾರ್ಹವಾದ ಹುದ್ದೆಗಳು ಲಾಭದಾಯ ಹುದ್ದೆಗೆ ವ್ಯಾಪ್ತಿಗೆ ಬರುವುದರಿಂದ ಸಂವಿಧಾನದ 164(1ಎ) ವಿಧಿಗೆ ವಿರುದ್ಧವಾಗಿ ನೇಮಕಾತಿ ಮಾಡಿರುವುದರಿಂದ ಅವುಗಳನ್ನು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಘೋಷಿಸಬೇಕು. ಪ್ರತಿವಾದಿಗಳನ್ನು ನೇಮಕ ಮಾಡಿರುವ ಹುದ್ದೆಯಿಂದ ತಕ್ಷಣಕ್ಕೆ ಅನ್ವಯಿಸುವಂತೆ ವಜಾ ಮಾಡಬೇಕು ಮತ್ತು ಅವರು ಪಡೆದಿರುವ ಸೌಲಭ್ಯಗಳನ್ನು ಹಿಂಪಡೆಯಬೇಕು. ಲಾಭದಾಯಕ ಹುದ್ದೆ ಅನುಭವಿಸಿರುವ ಆಧಾರದಲ್ಲಿ ಪ್ರತಿವಾದಿಗಳನ್ನು ಶಾಸಕ/ವಿಧಾನ ಪರಿಷತ್‌ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

42 ಮಂದಿಯ ಪೈಕಿ 34 ಶಾಸಕರಿಗೆ ವಿವಿಧ ನಿಗಮ/ಮಂಡಳಿ ಅಧ್ಯಕ್ಷ ಸ್ಥಾನ ಹುದ್ದೆ ಕಲ್ಪಿಸಲಾಗಿದ್ದು, ಒಬ್ಬರನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ ಮತ್ತು ಮೂವರನ್ನು ಮುಖ್ಯಮಂತ್ರಿ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಆಡಳಿತ ಸುಧಾರಣಾ ಆಯೋಗ, ಕೆಆರ್‌ಡಿಬಿ ಅಧ್ಯಕ್ಷ ಹುದ್ದೆಗೆ ಒಬ್ಬೊಬ್ಬರನ್ನು ನೇಮಕ ಮಾಡಲಾಗಿದ್ದು, ಇಬ್ಬರನ್ನು ದೆಹಲಿಗೆ ಕರ್ನಾಟಕದ ವಿಶೇಷ ಪ್ರತಿನಿಧಿಗಳ ಹುದ್ದೆ ಕಲ್ಪಿಸಲಾಗಿದೆ. ವಿವರ ಇಂತಿದೆ:

ಯಾವ ಶಾಸಕರಿಗೆ ಯಾವ ಹುದ್ದೆ?

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ (ಕರ್ನಾಟಕ ರಾಜ್ಯ ಕೈಗಾರಿಕಾ ಮೌಲಸೌಲಭ್ಯ ಅಭಿವೃದ್ಧಿ ಅಧ್ಯಕ್ಷ), ಮುದ್ದೇಬಿಹಾಳ ಶಾಸಕ ಅಪ್ಪಾಜಿ ಸಿ ಎಸ್‌ ನಾಡಗೌಡ (ಕರ್ನಾಟಕ ಸೋಪ್ಸ್‌ ಮತ್ತು ಡಿಜರ್ಜೆಂಟ್‌ ನಿಯಮಿತ ಅಧ್ಯಕ್ಷ), ಕಾಗವಾಡ ಶಾಸಕ ರಾಜು ಕಾಗೆ (ವಾಯವ್ಯ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷ), ಬಾಗಲಕೋಟೆ ಶಾಸಕ ಎಚ್‌ ವೈ ಮೇಟಿ (ಬಾಗಲಕೋಠೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ), ಗುಬ್ಬಿ ಶಾಸಕ ಎಸ್‌ ಶ್ರೀನಿವಾಸ್‌ (ವಾಸು) (ಕೆಎಸ್‌ಆರ್‌ಟಿಸಿ ಅಧ್ಯಕ್ಷ), ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ್‌ (ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ), ಹೊಸದುರ್ಗ ಶಾಸಕ ಬಿ ಜಿ ಗೋವಿಂದಪ್ಪ (ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ), ಮಾಗಡಿ ಶಾಸಕ ಎಚ್‌ ಸಿ ಬಾಲಕೃಷ್ಣ (ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ).

ರೋಣ ಶಾಸಕ ಜಿ ಎಸ್‌ ಪಾಟೀಲ್‌ (ಖನಿಜ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ), ಶಾಂತಿನಗರ ಶಾಸಕ ಎನ್‌ ಎ ಹ್ಯಾರಿಸ್‌ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ), ಬೈಲಹೊಂಗಲ ಶಾಸಕ ಮಹಾಂತೇಶ್‌ ಕೌಜಲಗಿ (ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ), ಸಿ ಪುಟ್ಟರಂಗಶೆಟ್ಟಿ (ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಅಧ್ಯಕ್ಷ), ಬೀಳಗಿ ಶಾಸಕ ಜಿ ಟಿ ಪಾಟೀಲ್‌ (ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ), ಸುರಪುರ ರಾಜ ವೆಂಕಟಪ್ಪ ನಾಯ್ಕ್‌ (ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ), ಭದ್ರಾವತಿ ಶಾಸಕ ಬಿ ಕೆ ಸಂಗೇಮೇಶ್ವರ (ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್‌ ಆರ್ಮಿ ಅಧ್ಯಕ್ಷ), ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ (ರಾಜ್ಯ ಗೃಹ ಮಂಡಳಿ ಅಧ್ಯಕ್ಷ), ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ್‌ ಅಬ್ಬಯ್ಯ (ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ), ಸಾಗರ ಶಾಸಕ ಬೇಲೂರು ಗೋಪಾಲ ಕೃಷ್ಣ (ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷ), ಬಂಗಾರಪೇಟೆ ಶಾಸಕ ಎಸ್‌ ಎನ್‌ ನಾರಾಯಣಸ್ವಾಮಿ (ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ ಅಧ್ಯಕ್ಷ), ಚಳ್ಳಕೆರೆ ಶಾಸಕ ಟಿ ರಘುಮೂರ್ತಿ (ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ).

ಶ್ರೀರಂಗಪಟ್ಟಣ ಶಾಸಕ ಎ ಬಿ ರಮೇಶ್‌ ಬಂಡಿಸಿದ್ದೇಗೌಡ (ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ), ಆನೇಕಲ್‌ ಶಾಸಕ ಬಿ ಶಿವಣ್ಣ (ಬಿಎಂಟಿಸಿ ಅಧ್ಯಕ್ಷ), ಬಾಗೇಪಲ್ಲಿ ಶಾಸಕ ಎಸ್‌ ಎನ್‌ ಸುಬ್ಬಾರೆಡ್ಡಿ (ರಾಜ್ಯ ಬೀಜ ನಿಗಮ ನಿಯಮಿತದ ಅಧ್ಯಕ್ಷ), ಧಾರವಾಡ ಶಾಸಕ ವಿನಯ್‌ ಕುಲಕರ್ಣಿ (ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ), ಎಚ್‌ ಡಿ ಕೋಟೆ ಶಾಸಕ ಅನಿಲ್‌ ಚಿಕ್ಕಮಾದು (ಜಂಗಲ್‌ ಲಾಡ್ಜಸ್‌ ಅಧ್ಯಕ್ಷ), ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ (ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ), ಕಲಬುರ್ಗಿ ಉತ್ತರ ಶಾಸಕ ಕನೀಜ್‌ ಫಾತಿಮಾ (ರೇಷ್ಮೆ ಉದ್ದಿಮೆಗಳ ನಿಗಮ ನಿಯಮದ ಅಧ್ಯಕ್ಷೆ), ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ (ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ), ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ (ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ).

ಕೆಜಿಎಫ್‌ ಶಾಸಕಿ ಎಂ ರೂಪಕಲಾ (ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ), ಕಾರವಾರ ಶಾಸಕ ಸತೀಶ್‌ ಸೈಲ್‌ (ಮಾರ್ಕೆಟಿಂಗ್‌ ಕನ್ಸಲ್ಟೆಂಟ್‌ ಅಂಡ್‌ ಏಜೆನ್ಸೀಸ್‌ ಅಧ್ಯಕ್ಷ), ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ (ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ), ಕಂಪ್ಲಿ ಶಾಸಕ ಜೆ ಎಂ ಗಣೇಶ್‌ (ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ), ಮಸ್ಕಿ ಶಾಸಕ ಬಸನಗೌಡ ತುರುವಿನಾಳ (ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ), ದೆಹಲಿ ವಿಶೇಷ ಪ್ರತಿನಿಧಿಗಳಾಗಿ ಶಿರಾ ಶಾಸಕ ಟಿ ಬಿ ಜಯಚಂದ್ರ ಮತ್ತು ಪರಿಷತ್‌ ಸದಸ್ಯ ಪ್ರಶಾಕ್‌ ಹುಕ್ಕೇರಿ, ವಿರಾಜಪೇಟೆ ಶಾಸಕ ಎ ಎಸ್‌ ಪೊನ್ನಣ್ಣ (ಸಿಎಂ ಕಾನೂನು ಸಲಹೆಗಾರ), ಜೇವರ್ಗಿ ಶಾಸಕ ಅಜಯ್‌ ಸಿಂಗ್‌ (ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ).

ಹಳಿಯಾಳ ಶಾಸಕ ಆರ್‌ ವಿ ದೇಶಪಾಂಡೆ (ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ), ಸಿಎಂ ರಾಜಕೀಯ ಸಲಹಾಗಾರನಾಗಿ ಆಳಂದ ಶಾಸಕ ಬಿ ಆರ್‌ ಪಾಟೀಲ್‌ (ಪ್ರಸ್ತುತ ರಾಜೀನಾಮೆ ನೀಡಿದ್ದಾರೆ), ರಾಜಕೀಯ ಕಾರ್ಯದರ್ಶಿಗಳಾಗಿ ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹ್ಮದ್‌ ಮತ್ತು ಕೆ ಗೋವಿಂದರಾಜು ಅವರನ್ನು ನೇಮಕ ಮಾಡಲಾಗಿದೆ.