ಬೆಂಗಳೂರು(Bengaluru): ಬೆಂಗಳೂರು ನಗರದಲ್ಲಿ ಸುಮಾರು 2 ಲಕ್ಷ ಅನಧಿಕೃತ ಹಾಗೂ ಮೂಲ ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿವೆ ಎಂಬ ಮಾಹಿತಿ ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಸರ್ವೆಯಲ್ಲಿ ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ರವೀಂದ್ರ ಪಿ. ಎನ್., ನಗರದಲ್ಲಿ ಮೂಲ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ 16,086 ಕಟ್ಟಡಗಳನ್ನು ಪಾಲಿಕೆ ಗುರುತಿಸಿದೆ. ಅದೇ ರೀತಿ ಬಿ ಖಾತಾ ಅಡಿಯಲ್ಲಿ ಬರುವ 1,81,236 ಕಟ್ಟಡಗಳನ್ನು ಗುರುತಿಸಲಾಗಿದೆ. ಬಿ ಖಾತಾ ಅಡಿಯಲ್ಲಿ ಬರುವ ಕಟ್ಟಡಗಳು ಅನಧಿಕೃತ ಅಥವಾ ಅಕ್ರಮವಾಗಿದೆ ಎಂದು ತಿಳಿಸಿದರು.
ಸರ್ವೆಯನ್ನು ಪೂರ್ಣಗೊಳಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಸರ್ವೆ ಕಾರ್ಯವನ್ನು ತ್ವರಿತಗತಿಯಲ್ಲಿ ಪುರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ನಮಗೆ ಸೂಚಿಸಿದ್ದಾರೆ ಎಂದು ರವೀಂದ್ರ ಹೇಳಿದರು.
ಕೋರ್ಟ್ ತೀರ್ಪಿನ ಅನುಸಾರ ಕ್ರಮ ಬಿ ಖಾತಾ ಆಸ್ತಿ ಮತ್ತು ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣದ ವಿಚಾರದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿದೆ. ಪಾಲಿಕೆಯು ಸದ್ಯ ತ್ವರಿತಗತಿಯಲ್ಲಿ ಈ ರೀತಿಯ ಕಟ್ಟಡಗಳ ಸರ್ವೆ ನಡೆಸುತ್ತಿದೆ. ಮುಂದೆ ನ್ಯಾಯಾಲಯ ತೀರ್ಪಿನ ಅನುಸಾರ ಈ ರೀತಿಯ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.
ಈ ರೀತಿಯ ಅನಧಿಕೃತ ಅಥವಾ ಅಕ್ರಮ ಕಟ್ಟಡಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳ ಸಭೆ ನಡೆಸಿ ತೀರ್ಮಾನಿಸಲಿದ್ದಾರೆ.














