ಮೈಸೂರು(Mysuru): ನಗರದ ವಿವಿಧೆಡೆ ಮಂಗಳವಾರ ಶಾಲಾ– ಕಾಲೇಜುಗಳು, ಸಂಘ– ಸಂಸ್ಥೆಗಳ ನೂರಾರು ಮಂದಿ ರಕ್ತದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನ ಆಚರಿಸಿದರು.
ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯುವ ಸಮುದಾಯ ರಕ್ತದಾನ ಮಾಡುವ ಮೂಲಕ ಜನರ ಜೀವ ಉಳಿಸಬೇಕು. ಎನ್‌ಸಿಸಿ, ಎನ್‌ಎಸ್‌ಎಸ್ ಚಟುವಟಿಕೆಗಳು ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಿಕೊಡುತ್ತವೆ. ನೂರಾರು ಕೆಡೆಟ್‌ಗಳು ರಕ್ತ ಸಂಗ್ರಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.
ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್.ಮಂಜುನಾಥ್ ಮಾತನಾಡಿ, ದೇಶದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಶಕ್ತಿಶಾಲಿ ಬೈಕ್, ಕಾರುಗಳನ್ನು ಹೊಂದಿದ್ದರೂ ಹಳ್ಳ–ಗುಂಡಿಮಯವಾದ ರಸ್ತೆಗಳಿವೆ ಎಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಡಬೇಕು. ರಕ್ತ ಸಂಗ್ರಹದ ಶೇ 30 ಭಾಗವು ಅಪಘಾತ ಪ್ರಕರಣಗಳಿಗೆ ಹೋಗುತ್ತದೆ. ಸುಂದರ ಬೈಕ್‌ಗಳನ್ನು ಖರೀದಿಸಿದಷ್ಟೇ, ರಕ್ತದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆಯಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಅನಿಮಿಯಾ ಮಹಿಳೆಯರನ್ನು ಕಾಡುತ್ತಿದೆ. ಜೀವನಶೈಲಿ, ಆಹಾರ ಕ್ರಮದ ಬದಲಾವಣೆಯು ದೇಹದಲ್ಲಿ ರಕ್ತದ ಕೊರತೆಗೆ ಕಾರಣವಾಗಿದೆ. ಗರ್ಭಿಣಿಯರು, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗ ಪೀಡಿತರಿಗೆ ಹಾಗೂ ಶಸ್ತ್ರಚಿಕಿತ್ಸೆಗೆ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ರಕ್ತದಾನ ಸೇರಿದಂತೆ ಯಾವುದೇ ಮಾದರಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದಾಗ ಉಂಟಾಗುವ ಸಂತೃಪ್ತಿ ಹಲವು ಸಾಧನೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಶಾರದಾವಿಲಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಚಂದ್ರಶೇಖರ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕಾರ್ಯದರ್ಶಿ ಡಾ.ಎಂ.ಎಸ್.ಜಯಂತ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ದೇವಿಕಾ ಇದ್ದರು.
ಚಾಮುಂಡಿ ಬೆಟ್ಟದ ಪಾದದಲ್ಲಿ ಜಾಗೃತಿ: ಬೋಗಾದಿಯ ‘ಚಾಮುಂಡೇಶ್ವರಿ ಯುವ ಬಳಗ’ ಚಾಮುಂಡಿ ಬೆಟ್ಟದ ಪಾದದಲ್ಲಿ ಆಯೋಜಿಸಿದ್ದ ‘ರಕ್ತದಾನ ಜಾಗೃತಿ ಅಭಿಯಾನ’ಕ್ಕೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಕ್ತವನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ನಾಗರಿಕರು, ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಬೇಕು. ನೂರಾರು ಜೀವಗಳನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ , ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಚಾಮುಂಡೇಶ್ವರಿ ಯುವ ಬಳಗದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ವಿನಯ್ ಕುಮಾರ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಜಯ್ ಶಾಸ್ತ್ರಿ , ವಿನಯ್ ಕಣಗಾಲ್, ಉದ್ಯಮಿ ಅಪೂರ್ವ ಸುರೇಶ್, ಲೋಹಿತ್ ಶ್ರೀಕಾಂತ್ ಕಶ್ಯಪ್, ಶಿವಕುಮಾರ್ ಇದ್ದರು.