ಮನೆ ರಾಜ್ಯ ಕಾನೂನಿಗೆ ಬದ್ಧವಾಗಿದ್ದರೆ ಹೆದರಿಕೆ ಏಕೆ? : ಎಸ್.ಟಿ.ಸೋಮಶೇಖರ್

ಕಾನೂನಿಗೆ ಬದ್ಧವಾಗಿದ್ದರೆ ಹೆದರಿಕೆ ಏಕೆ? : ಎಸ್.ಟಿ.ಸೋಮಶೇಖರ್

0

ಮೈಸೂರು(Mysuru): ಇ.ಡಿ. ಈಗಿನಿಂದಲ್ಲ, ಮುಂಚಿನಿಂದಲೂ ಇದೆ. ಯಾರು ಅಕ್ರಮವೆಸಗಿರುತ್ತಾರೆ ಅವರು ಭಯಪಡುತ್ತಾರೆ. ಕಾನೂನು ಬದ್ಧವಾಗಿದ್ದರೆ ಇ.ಡಿ. ಏನೂ ಮಾಡುವುದಕ್ಕೆ ಆಗಲ್ಲ, ಕಾನೂನು ಬದ್ಧವಾಗಿದ್ದರೆ ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅಭಿಪ್ರಾಯಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಇ.ಡಿ. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಅಕ್ರಮ ಮಾಡಿದವರಿಗೆ ಭಯ ಇರುತ್ತದೆ. ಸರಿಯಿದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಯಾರಿಗೂ ತೊಂದರೆ ಆಗಲ್ಲ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಕರ್ನಾಟಕದಲ್ಲಿ ಎಷ್ಟು ಜನರ ವಿಚಾರಣೆ ಮಾಡಿಲ್ಲ? ಎಂದು ಹೇಳಿದರು.

ಈ ವಿಷಯದಲ್ಲಿ ಕಾಂಗ್ರೆಸ್ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೆಚ್ಚಿಸಲು ಪ್ರತಿಭಟನೆ ಮಾಡಿದ್ದಾರೋ? ನಿಮ್ಮ ಪರವಾಗಿ ನಾವಿದ್ದೇವೆ ಎಂದು ತೋರಿಸಲು ಮಾಡ್ತಿದ್ದಾರಾ? ಈ ಹಂತದಲ್ಲಿ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಪ್ರತಿಭಟನೆ ಉದ್ದೇಶ ಅವರಲ್ಲೂ ಅಕ್ರಮ ಇರಬೇಕೋ ಎನ್ನಿಸುತ್ತದೆ. ಅದಕ್ಕೆ ಬೆಂಬಲವಾಗಿ ಕಾಂಗ್ರೆಸ್ ನಿಂತಂತಿದೆ. ಇ.ಡಿ. ತನಿಖೆಯಲ್ಲಿ ಎಲ್ಲವೂ ಹೊರಗೆ ಬರುತ್ತದೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದರು.

ಲಲಿತ್ ಮಹಲ್ ಹಸ್ತಾಂತರ; ಸಂಪುಟ ಉಪಸಮಿತಿ ವರದಿ ಬಳಿಕ ತೀರ್ಮಾನ

ಹೋಟೆಲ್ ಲಲಿತ್ ಮಹಲ್ ತಾಜ್ ಗ್ರೂಪ್ ಸುಪರ್ದಿಗೆ ನೀಡುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿ.ಪಿ. ಯೋಗೇಶ್ವರ್ ಸಚಿವರಾಗಿದ್ದ ಸಂದರ್ಭದಲ್ಲೂ ಈ ವಿಚಾರ ಬಂದಿತ್ತು. ಆಗ ಇಲ್ಲಿನ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದರು. ಆಗ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಆಗಿದ್ದಾಗ ತಡೆ ಹಿಡಿಯಲಾಗಿತ್ತು ಎಂದರು.

ಈಗ ಸಂಪುಟ ಉಪಸಮಿತಿ ಮಾಡಲಾಗಿದೆ. ಇದರಲ್ಲಿ ಆನಂದ್ ಸಿಂಗ್, ನಾರಾಯಾಣಗೌಡ ಅವರು ಇದ್ದಾರೆ. ಹೋಟೆಲ್ ನಿರ್ವಹಣೆಯನ್ನು ಜಂಗಲ್ ಲಾಡ್ಜ್ ರೆಸಾರ್ಟ್ ಗೆ ಕೊಡಲಾಗಿದ್ದು ಅದರಲ್ಲಿಯೇ ಮುಂದುವರಿಸಬೇಕಾ, ಬೇರೆಯವರಿಗೆ ನೀಡಬೇಕಾ ಎಂಬುದರ ಬಗ್ಗೆ ಸಂಪುಟ ಉಪಸಮಿತಿ ವರದಿ ನೀಡಲಿದೆ ಎಂದು ಹೇಳಿದರು.

ಲಲಿತ್ ಮಹಲ್ ಹೋಟೆಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರವಾಸಿಗರ ಆಕರ್ಷಣೆಯಾಗಿರುವುದರಿಂದ ಮತ್ತಷ್ಟು ಅಭಿವೃದ್ಧಿ ಮಾಡಬೇಕೆಂಬುದು ಸರ್ಕಾರದ ಉದ್ದೇಶ ಎಂದರು.

ಪ್ರವಾಸಿಗರು, ಸಾರ್ವಜನಿಕರು ಇಲ್ಲಿನ ನಿರ್ವಹಣೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸಂಪುಟದಲ್ಲಿ ಚರ್ಚಿಸಿದರು. ಸಂಪುಟ ಉಪಸಮಿತಿ ವರದಿ ನೀಡಿದ ಬಳಿಕ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಶಾಸಕ ರಾಮದಾಸ್, ಮೇಯರ್ ಸುನಂದಾ ಪಾಲನೇತ್ರಾ, ಮೂಡಾ ಅಧ್ಯಕ್ಷ ರಾಜೀವ್, ಎಸಿಪಿ ಗೀತಾ ಪ್ರಸನ್ನ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.

ಹಿಂದಿನ ಲೇಖನಲಘು ಮೋಟಾರು ವಾಹನ ಚಾಲನೆ ಪರವಾನಗಿವುಳ್ಳವರು ಸಾರಿಗೆ ವಾಹನ ಚಾಲನೆ ಮಾಡಬಹುದು: ಹೈಕೋರ್ಟ್
ಮುಂದಿನ ಲೇಖನವಿಶ್ವ ರಕ್ತದಾನಿಗಳ ದಿನ: ನಗರದ ಹಲವೆಡೆ ವಿವಿಧ ಸಂಘ– ಸಂಸ್ಥೆಗಳಿಂದ ಆಚರಣೆ