ಮನೆ ರಾಜ್ಯ ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಬೆಂಗಳೂರು ನಿವಾಸಿಗಳಿಗೆ ಹೊಸ ಅನುಭವ

ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಬೆಂಗಳೂರು ನಿವಾಸಿಗಳಿಗೆ ಹೊಸ ಅನುಭವ

0
ಸಾಂದರ್ಭಿಕ ಚಿತ್ರ

ಬೆಂಗಳೂರು: ದೊಡ್ಡ ದೊಡ್ಡ ಅಪಾರ್ಟ್​​​ಮೆಂಟ್​​ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸಣ್ಣಪುಟ್ಟ ವಸ್ತುಗಳನ್ನು ತರಬೇಕೆಂದರೆ ಅದೊಂದು ದೊಡ್ಡ ಸಾಹಸ. ಅಪಾರ್ಟ್​​ಮೆಂಟ್​​ ಆವರಣದಿಂದ ಹೊರಬಂದು ಟ್ರಾಫಿಕ್ ಜಾಮ್​ಗಳಲ್ಲಿ ಸಿಲುಕಿಕೊಂಡು ಹೋಗಿ ಬರಬೇಕಾದ ಅನಿವಾರ್ಯತೆ ಇನ್ನು ದೂರವಾಗಲಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ವಸತಿ ಸಮುಚ್ಛಯದ ನಿವಾಸಿಗಳಿಗೆ ಇದೀಗ ಡ್ರೋನ್‌ಗಳ ಮೂಲಕ ನೇರವಾಗಿ ಮನೆ ಬಾಗಿಲಿಗೆ ದಿನಸಿ, ಔಷಧಿ ಮತ್ತು ಇತರ ಅಗತ್ಯ ವಸ್ತುಗಳು ತಲುಪುವ ಹೊಸ ಸೌಲಭ್ಯ ಆರಂಭವಾಗಿದೆ. ಬಿಗ್‌ಬಾಸ್ಕೆಟ್ ಹಾಗೂ ಪ್ರೆಸ್ಟೀಜ್ ಫಾಲ್ಕನ್ ಸಿಟಿ ನಡುವೆ ಈ ಕುರಿತು ವಿಶಿಷ್ಟ ಒಪ್ಪಂದದ ಮೂಲಕ ಈ ನೂತನ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

ಈ ಸೇವೆಯ ಮೂಲಕ ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳು ಮೂರರಿಂದ ಐದು ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಹಬ್‌ಗಳಿಂದ ಡ್ರೋನ್ ಮೂಲಕ ಅಪಾರ್ಟ್‌ಮೆಂಟ್ ಆವರಣದ ನಿಗದಿತ ಸ್ಥಳಕ್ಕೆ ಕೇವಲ ಐದರಿಂದ 10 ನಿಮಿಷಗಳೊಳಗೆ ತಲುಪುತ್ತವೆ. ಅಲ್ಲಿಂದ ನೇಮಕಗೊಂಡ ಸಿಬ್ಬಂದಿ ಆ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾರೆ.

ಈ ಯೋಜನೆ ಕಳೆದ ಮಾರ್ಚ್‌ನಲ್ಲಿ ಪ್ರಾಯೋಗಿಕ ಹಂತದಲ್ಲಿ ಆರಂಭಗೊಂಡು, ಇತ್ತೀಚಿಗೆ ಅಧಿಕೃತ ವಾಣಿಜ್ಯ ಕಾರ್ಯಾಚರಣೆಗೆ ಪ್ರವೇಶಿಸಿದೆ. ಬಿಗ್‌ಬಾಸ್ಕೆಟ್ ಅಧಿಕಾರಿಗಳ ಪ್ರಕಾರ, ಪ್ರಾರಂಭದಲ್ಲಿ ಕೆಲವು ನಿಯಮಿತ ಗ್ರಾಹಕರೊಂದಿಗೆ ಈ ಸೇವೆಯನ್ನು ಪರೀಕ್ಷಿಸಲಾಗಿದೆ. ಯಶಸ್ವಿಯಾದ ನಂತರ ಇದನ್ನು ಇತರರಿಗೂ ವಿಸ್ತರಿಸಲಾಗಿದೆ. ‘ಡೆಕ್ಕನ್ ಹೆರಾಲ್ಡ್’ ವರದಿ ಪ್ರಕಾರ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಂಟೆಗಳ ಪೀಕ್ ಅವಧಿಯಲ್ಲಿ ಈ ಸೇವೆಗೆ ಹೆಚ್ಚಿನ ಬೇಡಿಕೆ ಇದೆ.

ಡ್ರೋನ್‌ಗಳು ಪೂರ್ಣವಾಗಿ ಜಿಪಿಎಸ್ ಆಧಾರಿತ ನ್ಯಾವಿಗೇಷನ್ ಬಳಸಿ ಕಾರ್ಯನಿರ್ವಹಿಸುತ್ತವೆ. ಯಾವುದೇ ಕ್ಯಾಮೆರಾಗಳನ್ನು ಹೊಂದಿಲ್ಲ, ಆದ್ದರಿಂದ ವೈಯಕ್ತಿಕ ಗೌಪ್ಯತೆಗೆ ಯಾವುದೇ ಅಪಾಯವಿಲ್ಲ ಎಂಬುದನ್ನು ಸಂಸ್ಥೆಗಳು ಖಚಿತಪಡಿಸಿವೆ. ಡ್ರೋನ್‌ಗಳು ನಿರ್ದಿಷ್ಟವಾದ ಬಾಹ್ಯ ಹಾಬ್‌ಗಳಿಂದ ಅಪಾರ್ಟ್‌ಮೆಂಟ್‌ನ ಆವರಣದ ಲ್ಯಾಂಡಿಂಗ್ ಝೋನ್‌ಗಳಿಗೆ ಮಾತ್ರ ತೆರಳುತ್ತವೆ.

ಡ್ರೋನ್ ಮೂಲಕ ಅಗತ್ಯವಸ್ತುಗಳ ವಿತರಣೆ ಸೇವೆ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಲಭ್ಯವಿದೆ. ಆರ್ಡರ್ ಏಳು ಕಿಲೋಗಿಂತ ಕಡಿಮೆ ತೂಕವಿದ್ದರೆ, ವಸ್ತುಗಳನ್ನು ನಾಲ್ಕರಿಂದ ಐದು ನಿಮಿಷಗಳಲ್ಲಿ ಪ್ರೆಸ್ಟೀಜ್ ಫಾಲ್ಕನ್ ಸಿಟಿಗೆ ತಲುಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಡಾರ್ಕ್ ಸ್ಟೋರ್ (ಶೇಖರಣಾ ಸೌಲಭ್ಯ) ಅಪಾರ್ಟ್‌ಮೆಂಟ್​ನಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿದೆ ಮತ್ತು ಪ್ರಸ್ತುತ ಎರಡು ಡ್ರೋನ್‌ಗಳನ್ನು ಬಳಸಿಕೊಂಡು ವಿತರಣೆಯನ್ನು ನಡೆಸಲಾಗುತ್ತಿದೆ ಎಂದು ಬಿಗ್‌ಬಾಸ್ಕೆಟ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯ ಅವಿನಾಶ್ ಹೆಚ್.ವಿ ಪ್ರಕಾರ, “ಈ ಸೇವೆಯಿಂದ ದಿನಸಿ ತರಲು ಹೊರಗೆ ಹೋಗಬೇಕಾದ ಅವಶ್ಯಕತೆ ಕಡಿಮೆಯಾಗಿದೆ. ನಮ್ಮ ಅಪಾರ್ಟ್‌ಮೆಂಟ್‌ನಲ್ಲಿಯೇ ಸೇವೆ ದೊರಕುತ್ತಿರುವುದು ನಿಜಕ್ಕೂ ಸುಧಾರಿತ ನಗರ ಜೀವನದ ಉದಾಹರಣೆ.” ಅಲ್ಲದೆ, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಗೃಹಿಣಿಯರು ಈ ಸೇವೆಯಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದೀಗ ಪ್ರಾರಂಭವಾದ ಈ ಡ್ರೋನ್ ವಿತರಣಾ ಸೇವೆ ಇನ್ನು ಹೆಚ್ಚಿನ ಅಪಾರ್ಟ್‌ಮೆಂಟ್‌ಗಳಿಗೆ ವಿಸ್ತರಿಸುವ ಯೋಜನೆ ಇದೆ. ಬಿಗ್‌ಬಾಸ್ಕೆಟ್ ಹಾಗೂ ಇನ್ನಿತರ ಇ-ಕಾಮರ್ಸ್ ಸಂಸ್ಥೆಗಳು ಈ ಮಾದರಿಯನ್ನು ನಗರಾದ್ಯಾಂತ ಅನುಸರಿಸಲು ಸಿದ್ಧತೆ ನಡೆಸುತ್ತಿದ್ದರೆ, ನಗರ ಪಾಲಿಕೆಗಳು ಹಾಗೂ ನಾಗರಿಕ ವಿಮಾನಯಾನ ಇಲಾಖೆಗಳಿಂದ ಸಹಕಾರದ ನಿರೀಕ್ಷೆಯಿದೆ.