ಮನೆ ಸ್ಥಳೀಯ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಹಾಗೂ ಆಷಾಡ ಶುಕ್ರವಾರಗಳ ಪೂರ್ವಸಿದ್ಧತಾ ಸಭೆ: ಜಿ. ಲಕ್ಷ್ಮೀಕಾಂತ ರೆಡ್ಡಿ

ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಹಾಗೂ ಆಷಾಡ ಶುಕ್ರವಾರಗಳ ಪೂರ್ವಸಿದ್ಧತಾ ಸಭೆ: ಜಿ. ಲಕ್ಷ್ಮೀಕಾಂತ ರೆಡ್ಡಿ

0

ಮೈಸೂರು : ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಹಾಗೂ ಆಷಾಡ ಶುಕ್ರವಾರಗಳ ಆಚರಣೆಗೆ ಅಗತ್ಯ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಪ್ರಕಟಿಸಿದರು.

ಇಂದು ಜಿಲ್ಲಾ ಪಂಚಾಯತ್ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಆಷಾಡ ಮಾಸದ 4 ಶುಕ್ರವಾರಗಳು ಮತ್ತು ಅಮ್ಮನವರ ಜನ್ಮೋತ್ಸವ ಪ್ರಯುಕ್ತ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅದರ ಪೂರ್ವ ಸಿದ್ಧತಾ ಕಾರ್ಯಕ್ರಮಗಳು, ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನಗಳಲ್ಲಿ ಯಾವುದೇ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ. ವಾಹನಗಳನ್ನು ಲಲಿತಾ ಮಹಲ್ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ಭಕ್ತಾದಿಗಳಿಗೆ ಸಾರ್ವಜನಿಕ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜೂನ್ 27, ಜುಲೈ 04, ಜುಲೈ 11, ಜುಲೈ 18 ರಂದು ನಾಲ್ಕು ಆಷಾಢ ಶುಕ್ರವಾರಗಳು ಹಾಗೂ ಜುಲೈ 17 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಆಚರಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಬೇಕು. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಸ್ವಚ್ಛತೆ ಮಾಡಬೇಕು. ಚೆಸ್ಕಾಂ ವತಿಯಿಂದ 1000 ಮೆಟ್ಟಿಲುಗಳ ಬಳಿಯಿರುವ ವಿದ್ಯುತ್ ದೀಪಗಳ ದುರಸ್ಥಿ ಹಾಗೂ ಬೆಟ್ಟದ ದೇವಾಲಯಗಳಿಗೆ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.

ಆಷಾಡ ಶುಕ್ರವಾರ ಹಾಗೂ ಆಷಾಡ ಮಾಸದ ಶನಿವಾರ ಹಾಗೂ ಭಾನುವಾರಗಳಂದು, ಸಾಮಾನ್ಯ ಪ್ರವೇಶ ದರ್ಶನಕ್ಕೆ 50 ರೂ., ಹಾಗೂ ವಿಶೇಷ ದರ್ಶನಕ್ಕೆ 300 ರೂ. ಗಳ ಟಿಕೆಟ್ ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್, ಡಿಸಿಪಿ ಮುತ್ತುರಾಜ್, ಚಾಮುಂಡೇಶ್ವರಿ ಅಭಿವೃದ್ದಿ ಪ್ರಾಧಿಕಾರದ ರೂಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.